– ಬಳ್ಳಾರಿ ಸಮಾಜ ಸೇವಕನಿಂದ ವಿನೂತನ ಪ್ರಯತ್ನ
– ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಹುದ್ದೆ
ಬಳ್ಳಾರಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಅದರಲ್ಲೂ ನಗರ ಪ್ರದೇಶ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆ ನಾನಾ ಕಸರತ್ತು ಮಾಡುತ್ತದೆ. ಆದರೆ ಜಿಲ್ಲೆಯ ಒಂದು ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗಬೇಕು ಎಂಬ ಉದ್ದೇಶದಿಂದ ವ್ಯಕ್ತಿಯೊಬ್ಬರು ಮಕ್ಕಳ ಖಾತೆಗೆ ಪ್ರತಿ ವರ್ಷ 1 ಸಾವಿರ ರೂ. ಜಮೆ ಮಾಡುತ್ತಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ ಸಿದ್ದರಾಮೇಶ್ವರ ಗೌಡ ಒಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಶಾಸ್ತ್ರೀಯ ನಗರ ಪ್ರತಿ ಮನೆಗಳಿಗೂ ತೆರಳಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ನಾನು ನಿಮ್ಮ ಮಗುವಿಗೆ 1 ಸಾವಿರ ಹಣ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಬಾಂಡ್ ಕೊಡ್ತೀನಿ ಅಂತ ಆಫರ್ ನೀಡುತ್ತಿದ್ದಾರೆ.
ಸಿದ್ದರಾಮೇಶ್ವರ ಗೌಡ ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದು, ಕಡುಬಡತನದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಇವರು ಸರ್ಕಾರಿ ಶಾಲೆಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್
ಶಿಕ್ಷಣ ಇಲಾಖೆ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಸೇರುವಂತೆ ದಾಖಲಾತಿ ಆಂದೋಲನ ಮಾಡುತ್ತಿದೆ. ಇದನ್ನ ಕಂಡ ಸಿದ್ದರಾಮೇಶ್ವರಗೌಡ ಶಿಕ್ಷಕರ ಮಾಡುವ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ಮನೆ ಮನೆಗೆ ಹೋಗಿ ನಿಮ್ಮ ಮಕ್ಕಳನ್ನ ಸರ್ಕಾರಿ ಶಾಲೆ ಸೇರಿಸಿ. ಮಗುವಿಗೆ ಸಾವಿರ ಹಣ ಡೆಪಾಸಿಟ್ ಮಾಡುತ್ತೇನೆ. 18 ವರ್ಷದ ಬಳಿಕ ಮಗುವಿನ ವ್ಯಾಸಂಗ ಸಹಾಯ ಆಗುತ್ತದೆ ಎಂದು ಹೇಳಿ ಸರ್ಕಾರಿ ಶಾಲೆಗಳ ಉಳಿಯುವಿಗಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಕಡು ಬಡತನದಲ್ಲಿ ಹುಟ್ಟಿದ ಸಿದ್ದರಾಮೇಶ್ವರಗೌಡ ತಾವು ವ್ಯಾಸಂಗ ಮಾಡಲು ಪಡಬಾರದ ಕಷ್ಟ ಪಟ್ಟಿದ್ದರಂತೆ. ನಾನು ಪಟ್ಟ ಕಷ್ಟಗಳು ಮಕ್ಕಳಿಗೆ ಎದುರಾಗಬಾರದು. ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳ ದಾಖಲಾಗಬೇಕು ಅಂತಾ ಈ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.
ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ಮಾತು ಹೇಳ್ತಿದ್ದಾರೆ. ತಮ್ಮ ಕೆಲಸದ ಬಿಡುಗಡೆ ಸಮಯದಲ್ಲಿ ತಾನೇ ಖುದ್ದಾಗಿ ಮನೆ ಮನೆಗೆ ತೆರಳುತ್ತಿದ್ದಾರೆ. ತಾವು ವಾಸವಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಶಾಲೆಗೆ ಕೂಡುಗೆ ನೀಡುತ್ತಿದ್ದಾರೆ. ಇವರ ಜಾಗೃತಿ ನೋಡಿ ಪೋಷಕರು ಈಗಾಗಲೇ 16 ಮಕ್ಕಳನ್ನು ದಾಖಲಾತಿ ಮಾಡಿದ್ದಾರೆ.
ಶಾಸ್ತ್ರಿ ನಗರದ ಶಾಲೆಯಲ್ಲಿ ಈ ಕೆಲಸ ಯಶಸ್ವಿಯಾದರೆ ತನ್ನ ಸ್ನೇಹಿತರ ಜೊತೆಗೂಡಿ ಬಳ್ಳಾರಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ತಮ್ಮ ಮುಂದುವರಿಸುವ ಕನಸು ಹೊತ್ತಿದ್ದಾರೆ. ಇವರ ಜಾಗೃತಿ ಕಾರ್ಯಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಸಂಘಟನೆ ಕೂಡ ಸಾಥ್ ನೀಡಿದೆ.