– ತಾಯಿಗೆ 5 ಸಾವಿರ ನೀಡಿ, ಮಗುವನ್ನು 50 ಸಾವಿರಕ್ಕೆ ಮಾರಿದ್ರು
ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯ ವೈದ್ಯರೇ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವತಿಯೊಬ್ಬಳ ಕಳೆದ ಮಾರ್ಚ್ 14ರಂದು ಹೆರಿಗೆ ನೋವು ಬಂದಿದ್ದರಿಂದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಯುವತಿಗೆ ಮದುವೆಯಾಗದ ಕಾರಣ ಕೊಪ್ಪ ತಾಲೂಕು ಆಸ್ಪತ್ರೆ ವೈದ್ಯ ಡಾ.ಬಾಲಕೃಷ್ಣ, ನಿನಗೆ ಮಗುವನ್ನ ಸಾಕಲು ಆಗುವುದಿಲ್ಲ. ಮಗುವನ್ನ ಇಲ್ಲೇ ಬಿಟ್ಟು ಹೋಗು, ಇಲ್ಲದ್ದಿದರೆ ಪೊಲೀಸರಿಗೆ ನಿನ್ನ ವಿರುದ್ಧ ದೂರು ನೀಡುವುದಾಗಿ ವೈದ್ಯ ಹೆದರಿಸಿದ್ದಾನೆ.
ಮದುವೆಗೂ ಮುಂಚೆ ಮಗು ಜನಿಸಿದ್ದರಿಂದ ಹೆದರಿದ ಯುವತಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಆಗ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಮಗುವನ್ನು ತಮಿಳುನಾಡಿನಿಂದ ಬಂದು ಶೃಂಗೇರಿಯಲ್ಲಿ ವಾಸವಿದ್ದ ಪ್ರೇಮಾಲತಾ ಎಂಬುವರಿಗೆ ಮಗುವನ್ನು ಮಾರಾಟ ಮಾಡಿದ್ದಾನೆ. ಯುವತಿಯ ತಾಯಿಗೆ ವೈದ್ಯ 5,000 ಹಣ ನೀಡಿದ್ದರು. ಆದರೆ ಈಗ 8 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು ಮಗುವಿನ ತಾಯಿ ವೈದ್ಯ ಬಾಲಕೃಷ್ಣ ಹಾಗೂ ಇಬ್ಬರು ದಾದಿಯರಾದ ಶೋಭಾ ಹಾಗೂ ರೇಷ್ಮಾ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.
ವೈದ್ಯರು ನನಗೆ 5000 ಹಣ ನೀಡಿ ನನ್ನ ಮಗುವನ್ನು 50 ಸಾವಿರಕ್ಕೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ. ಹಣಕ್ಕಾಗಿ ಮಗು ಮಾರಾಟವಾಗಿರುವುದರಿಂದ ಇದೀಗ ಕೊಪ್ಪ ಠಾಣೆಯಲ್ಲಿ ಮಗು ಮಾರಾಟ ಮಾಡಿದವರು ಹಾಗೂ ಕೊಂಡವರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವನ್ನು ಚಿಕ್ಕಮಗಳೂರಿನ ಬಾಲಮಂದಿರಕ್ಕೆ ಬಿಟ್ಟು ತನಿಖೆ ಆರಂಭಿಸಿದ್ದಾರೆ.
ಮದುವೆಯಾಗದೆ ಗರ್ಭಿಣಿಯಾದ ಯುವತಿಗೆ ಡೆಲಿವರಿ ಮಾಡಿಸಿದ ವೈದ್ಯ ಪೊಲೀಸ್ ಕಂಪ್ಲೆಂಟ್ ಆಗುತ್ತೆ ಎಂದು ಆ ಯುವತಿಗೆ ಹೆದರಿಸಿ ಮಗುವನ್ನ 50,000 ಸಾವಿರಕ್ಕೆ ಮಾರಿ, ಆ ಯುವತಿಗೆ 5 ಸಾವಿರ ಹಣ ನೀಡಿದ್ದ. 8 ತಿಂಗಳ ಬಳಿಕ ಇಬ್ಬರು ನರ್ಸ್ ಹಾಗೂ ವೈದ್ಯ ಸೇರಿ ಮಗುವನ್ನು ಕೊಂಡುಕೊಂಡವಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.