– ಧಾರ್ಮಿಕ ಕ್ಷೇತ್ರಗಳಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ
– ನಾಲ್ಕು ಬ್ಯಾಗ್ ಗಳಷ್ಟು ದಾಖಲೆ ವಶಕ್ಕೆ
ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 50ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಗೆ ಮೋಸ ಮಾಡಿ 2 ಕೋಟಿಗೂ ಅಧಿಕ ಹಣ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
Advertisement
ಬೆಂಗಳೂರಿನ ನಾಗರಬಾವಿ ಸಮೀಪದ ಬೈರವೇಶ್ವರ ನಿವಾಸಿ ಪ್ರಭಾಕರ್ ಚಿಕ್ಕಮಗಳೂರು ಪ್ರವಾಸಕ್ಕೆ ಬರುತ್ತಿದ್ದನು. ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದ ಪ್ರಭಾಕರ್ ಅಲ್ಲಿಯ ಸರ್ವರ್ ಗೆ ಕೆಲಸದ ಆಮಿಷ ಒಡ್ಡಿದ್ದನು. ಸರ್ವರ್ ಉಮೇಶ್ ನಿಂದ 7 ಲಕ್ಷ ಪಡೆದು ಎಸ್.ಎಸ್.ಎಲ್.ಸಿ ಬೋರ್ಡ್ ನಲ್ಲಿಯ ಟೈಪಿಸ್ಟ್ ಕೆಲಸದ ನಕಲಿ ನೇಮಕಾತಿ ಪತ್ರ ಸಹ ನೀಡಿದ್ದನು. ಇದೇ ರೀತಿ ನಕಲಿ ನೇಮಕಾತಿ ಪತ್ರ ನೀಡುತ್ತ 50ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳಿಂದ ಹಣ ಪಡೆದುಕೊಂಡು ವಂಚಿಸಿದ್ದಾನೆ.
Advertisement
Advertisement
ನಕಲಿ ಇ-ಮೇಲ್ ಐಡಿ: ಚಿಕ್ಕಮಗಳೂರು, ಬೆಂಗಳೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಯ ಯುವಕ-ಯುವತಿಯರಿಗೆ ಕೆಲಸ ಆಸೆ ತೋರಿಸಿ ಯಾಮಾರಿಸಿದ್ದಾನೆ. ಕೆಲವರಿಗೆ ನಕಲಿ ಇಮೇಲ್ ಐಡಿ ಮೂಲಕ ಆಫರ್ ಲೇಟರ್ ನೀಡಿದ್ದಾನೆ. ನೀವು ಪ್ರೊಬೆಷನರಿ ಪಿರಿಯಡ್ ನಲ್ಲಿ ಇದ್ದೀರಾ ಎಂದು ಎರಡು ತಿಂಗಳು ಸಂಬಳ ಕೂಡ ಹಾಕಿದ್ದಾನೆ. ಕೋವಿಡ್ ಮುಗಿದ ಕೂಡಲೇ ನಿಮಗೆ ಕೆಲಸಕ್ಕೆ ಆಹ್ವಾನ ಬರುತ್ತೆಂದು ಅಂಗೈಯಲ್ಲಿ ಆಕಾಶ ತೋರಿಸಿದ್ದನು.
Advertisement
ಮೋಸದ ಅರಿವಾಗಿ ಉಮೇಶ್ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಪ್ರಕರಣದ ಬೆನ್ನು ಬಿದ್ದು ಆರೋಪಿಯನ್ನ ಬಂಧಿಸಿದ ಮೇಲೆ ಕಾಫಿನಾಡ ಖಾಕಿಗಳೇ ಬೆಚ್ಚಿ ಬಿದ್ದಿದ್ದರು. ಆತ ಇಂಡಿಯನ್ ಪೋಸ್ಟ್, ಇಸ್ರೋ, ಮೆಸ್ಕಾಂ, ಎಸ್.ಎಸ್.ಎಲ್.ಸಿ, ಪಿಯುಸಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಎಲ್ಲರಿಂದ 10-15 ಲಕ್ಷ ಹಣ ಪಡೆದ ವಿಚಾರ ಬೆಳಕಿಗೆ ಬಂದಿದೆ. ನಾನು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಂದು ಹೇಳಿಕೊಂಡು ಮೋಸ ಮಾಡಿದ್ದಾನೆ.
ತಿರುಪತಿಗೆ ಕಾಣಿಕೆ: ಮೋಸದ ಹಣದಲ್ಲಿಯೇ ತಿರುಪತಿ ತಿಮ್ಮಪ್ಪನಿಗೆ ಐದು ಲಕ್ಷ ಕಾಣಿಕೆ ಹಾಕಿ ಭಕ್ತಿ ಮೆರೆದಿದ್ದ. ವೈಷ್ಣೋದೇವಿ ದರ್ಶನಕ್ಕೂ ಹೋಗಿ ಬಂದಿದ್ದ. ಈತ ಧಾರ್ಮಿಕ ಕ್ಷೇತ್ರಗಳಿಗೆ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ, ಉದ್ಯೋಗಾಕಾಂಕ್ಷಿಗಳಿಂದ ಕಿತ್ತ ಹಣದಲ್ಲಿ ಎರಡೂವರೆ ಕೋಟಿಗೆ ಮನೆ ಖರೀದಿಸಲು ಮುಂದಾಗಿದ್ದ. ಇದೇ ಕೆಲಸದ ಹಣದಲ್ಲಿ 15 ಲಕ್ಷ ಕೊಟ್ಟು ಇನ್ನೋವಾ ಕಾರ್ ಕೂಡ ಖರೀದಿಸಿದ್ದಾನೆ.
ಪ್ರಭಾಕರ್ ಬಂಧನದ ವೇಳೆಯಲ್ಲೂ ಕೂಡ ಕಾರಿನಲ್ಲಿ 48 ಜನರ ಮೂಲ ದಾಖಲೆಗಳು ಪತ್ತೆಯಾಗಿವೆ. ಎಲ್ಲಾ ಇಲಾಖೆಯ ಪೋಸ್ಟಲ್ ಅಡ್ರೆಸ್, ಆಫರ್ ಲೆಟರ್ ಗಳನ್ನ ಈತನೇ ಪ್ರಿಂಟ್ ಮಾಡಿಸಿ ಶೇಖರಿಸಿಟ್ಟಿಕೊಂಡಿದ್ದ. ಈತನಿಂದ ಪೊಲೀಸರು ವಶಪಡಿಸಿಕೊಂಡ ದಾಖಲೆಗಳೇ ನಾಲ್ಕೈದು ಬ್ಯಾಗ್ ಗಳಷ್ಟಿವೆ.
15 ದಿನಗಳ ಕಾಲ ಪ್ರಭಾಕರ್ ಬೆನ್ನ ಹಿಂದೆ ಬಿದ್ದು ಈತನ ಎಲ್ಲಾ ಚಲನ-ವಲನಗಳನ್ನ ಗಮನಿಸಿ ಕಾಫಿನಾಡ ನಗರ ಠಾಣೆ ಪಿಎಸ್‍ಐ ತೇಜಸ್ವಿ ಹಾಗೂ ಇತರೇ ಪೊಲೀಸರು ಈತನನ್ನ ದಾಖಲೇ ಸಮೇತ ಅರೆಸ್ಟ್ ಮಾಡಿ ತನಿಖೆಗೆ ಒಳಪಡಿಸಿದ್ದಾರೆ. ಈತನನ್ನ ಬಂಧಿಸಿದ ಬಳಿಕ ಸುಮಾರು 70-80 ಲಕ್ಷದಷ್ಟು ಹಣವನ್ನ ಪೊಲೀಸರು ರಿಕವರಿ ಮಾಡಿದ್ದಾರೆ.