– ಅಂಬುಲೆನ್ಸ್, ಆಕ್ಸಿಜನ್ ಬಳಿಕ ಇದೀಗ ಸೋಂಕಿತರಿಗೆ ಔಷಧಿ ಕೊರತೆ
ಬೆಂಗಳೂರು: ಕೊರೊನಾ ನಿರ್ವಹಣೆಯಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಸರ್ಕಾರ ಎಡವುತ್ತಿದ್ದು, ಈ ಹಿಂದೆ ಬೆಡ್, ಅಂಬುಲೆನ್ಸ್, ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಆದರೆ ಇದೀಗ ಇನ್ನೂ ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು, ಸೋಂಕಿತರಿಗೆ ಅವಶ್ಯವಾಗಿರುವ ಆ್ಯಂಟಿ ವೈರಲ್ ಡ್ರಗ್ ಕೊರತೆ ಕಾಡುತ್ತಿದೆ.
Advertisement
ಸಿಲಿಕಾನ್ ಸಿಟಿಯಲ್ಲಿ ಈ ಔಚಧಿ ಕೊರತೆ ಕಾಡುತ್ತಿದ್ದು, ಹೀಗಾಗಿ ಕೊರೊನಾ ವಿಚಾರದಲ್ಲಿ ಬೆಂಗಳೂರು ಡೇಂಜರ್ ಝೋನ್‍ನಲ್ಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಆಕ್ಸಿಜನ್ ಕೊರತೆ ಬಳಿಕ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಡ್ರಗ್ ಪ್ರಾಬ್ಲಂ ಶುರುವಾಗಿದೆ. ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿ ವೈರಲ್ ಡ್ರಗ್ `ರೆಮ್ದೆಸಿವಿರ್’ ಔಷಧಿ ಕೊರತೆ ಎದುರಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬ ವಿಚಾರ ತಿಳಿದು ಬಂದಿದೆ
Advertisement
ಆಕ್ಸಿಜನ್ ಜೊತೆ `ರೆಮ್ದೆಸಿವಿರ್’ ಕಡಿಮೆಯಾದರೆ ಏನು ಗತಿ ಎಂಬುದು ರೋಗಿಗಳ ಸಂಬಂಧಿಕರ ಅಳಲು. ರೆಮ್ದಿಸಿವಿರ್ ಡ್ರಗ್ ಕೊರತೆಯಾದರೆ ಸಾವು ನೋವುಗಳು ಸಂಭವಿಸುವುದು ಹೆಚ್ಚಿರುತ್ತದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಇದು ಅವಶ್ಯಕವಾಗಿದೆ. ಕೋವಿಡ್-19 ಪ್ರಕರಣಗಳು ಹೆಚ್ಚಾದ ಮೇಲೆ ಆ್ಯಂಟಿ ವೈರಲ್ ಡ್ರಗ್ ಕೊರತೆ ಹೆಚ್ಚಾಗುತ್ತಿದೆ.
Advertisement
Advertisement
ರೆಮ್ದೆಸಿವಿರ್ ಅಂದರೆ ಏನು ?
ರೆಮ್ದಿಸಿವಿರ್ ಆಂಟಿ ವೈರಲ್ ಡ್ರಗ್ ಆಗಿದ್ದು, ಆಕ್ಸಿಜನ್ ಲೆವೆಲ್ ಕಡಿಮೆ ಇರುವವರಿಗೆ ಇದನ್ನು ನೀಡಲಾಗುತ್ತದೆ. ಈ ಔಷಧಿಯನ್ನು ಆಕ್ಸಿಜನ್ ಲೆವೆಲ್ ಕಡಿಮೆ ಇರುವ ರೋಗಿಗಳಿಗೆ, ಉಸಿರಾಟದ ಸಮಸ್ಯೆ ಇರುವವರಿಗೆ ನೀಡುತ್ತಾರೆ. ಐಸಿಯುನಲ್ಲಿರುವ ರೋಗಿಗಳಿಗೆ ಇದು ಅವಶ್ಯಕವಾಗಿದೆ. ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಅತಿ ಮುಖ್ಯ.
ಎಷ್ಟು ಅವಶ್ಯಕ?
ಆ್ಯಂಟಿ ವೈರಲ್ ಡ್ರಗ್ ಒಬ್ಬ ರೋಗಿಗೆ 6 ವಯಲ್ ಬೇಕು (100 ಎಂಜಿ ಗೆ ಒಂದು ವಯಲ್), ಒಬ್ಬ ರೋಗಿಗೆ ಆರು ದಿನಗಳ ಕಾಲ ಆರು ವಯಲ್ ನೀಡಬೇಕು. ವಯಲ್ ನೀಡದಿದ್ದರೆ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಆಕ್ಸಿಜನ್ ಲೆವೆಲ್ ಕಡಿಮೆ ಇರುವ ಈ ಔಷಧಿಯನ್ನು ಕೊಡಲೇ ಬೇಕು.
1 ತಿಂಗಳಿನಿಂದ ಕೊರತೆ:
ಒಂದು ತಿಂಗಳಿನಿಂದಲೂ ಈ ಡ್ರಗ್ ಕೊರತೆ ಎದುರಾಗಿದೆ, ಕೋವಿಡ್ ಕೇಸ್ ಹೆಚ್ಚಾದ ಹಿನ್ನಲೆ ಕೊರತೆ ಹೆಚ್ಚಾಗಿದೆ. ಅಲ್ಲದೆ ಈ ಡ್ರಗ್ ಸರಿಯಾಗಿ ಉತ್ಪಾದನೆ ಆಗುತ್ತಿಲ್ಲ ಎನ್ನಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸರಿಯಾಗಿ ಸಿಗುತ್ತಿಲ್ಲ. ಅಲ್ಲದೆ ಮಾರ್ಕೆಟ್ ನಲ್ಲಿ ಇದು ಲಭ್ಯವಿಲ್ಲ. ಬೌರಿಂಗ್, ಇಎಸ್‍ಐ, ಕೆ.ಸಿ.ಜನರಲ್ ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಈ ಔಷಧಿ ಲಭ್ಯವಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ 160 ಕೋವಿಡ್-19 ಬೆಡ್ ಇವೆ. ಆದರೆ 10 ದಿನದಿಂದ ಈ ಔಷಧಿ ಕೊರತೆ ಕಾಡುತ್ತಿದೆ. ಇಎಸ್‍ಐ ನಲ್ಲಿ ಸಹ ಇದರ ಕೊರತೆ ಕಾಣುತ್ತಿದೆ. ಹೀಗಾಗಿ ಆತಂಕ ಎದುರಾಗಿದೆ.
ಕೊರತೆಗೆ ಕಾರಣಗಳೇನು?
ಈ ಔಷಧಿ ಹೆಚ್ಚು ಉತ್ಪಾದನೆ ಆಗುತ್ತಿಲ್ಲ, ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಅಲ್ಲದೆ ಕೆಲವರು ಇದನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಅರೋಪ ಸಹ ಕೇಳಿ ಬಂದಿದೆ. ಬೇಡಿಕೆ ಅನುಗುಣವಾಗಿ `ರೆಮ್ದೆಸಿವಿರ್’ ಔಷಧಿ ಉತ್ಪಾದನೆ ಆಗದಿರುವುದರಿಂದ ಸಮಸ್ಯೆ ಎದುರಾಗಿದೆ.
ಕೊರೋನಾ ಡೇಂಜರ್ ಝೋನ್‍ನಲ್ಲಿ ಬೆಂಗಳೂರು ಇದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದಿಗೆ 1 ಲಕ್ಷ ದಾಟುವ ಸಾಧ್ಯತೆಯಿದೆ. ಇಂದು ಸಹ 2,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ. ಇನ್ನು 10 ದಿನಗಳಲ್ಲಿ 30,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ ಹೊತ್ತಿಗೆ ಬೆಂಗಳೂರಲ್ಲೇ 2 ಲಕ್ಷ ದಾಟಿದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗುತ್ತಿದೆ.