ಹಾಸನ: ಸರ್ಕಾರ ರೈತರ ಬೆಳೆ ಹಾನಿಗೆ ನಿಗದಿ ಮಾಡಿರುವ ಬೆಲೆ ತೀರ ಅವೈಜ್ಞಾನಿಕವಾಗಿದ್ದು, ಅದರ ಪುನರ್ ವಿಮರ್ಶೆ ಆಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿ ಹಲವೆಡೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ರೈತರ ಕಷ್ಟ ಆಲಿಸಿದ ನಂತರ ಮಾತನಾಡಿದ ಅವರು, ಭಾರೀ ಗಾಳಿ ಮಳೆಯಿಂದ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ನಮ್ಮ ರೈತ ತೀರ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸರ್ಕಾರ ಬೆಳೆ ಹಾನಿಗೆ ಬೆಲೆ ನಿಗದಿ ಮಾಡಿರುವ ಕಾನೂನು ತೀರ ಅವೈಜ್ಞಾನಿಕವಾಗಿದ್ದು, ರೈತ ಉಳಿಯಬೇಕಾದರೆ ಅವನಿಗೆ ಏನು ಖರ್ಚಾಗಿರುತ್ತೆ ಅಷ್ಟು ಹಣ ಕೊಡಬೇಕು. ಬೆಲೆ ನಿಗದಿ ಪುನರ್ ವಿಮರ್ಶೆ ಆಗಬೇಕು ಎಂದಿದ್ದಾರೆ.
ಈಗಿರುವ ಸರ್ಕಾರ ಯಾವ್ಯಾವುದೋ ರೂಪದಲ್ಲಿ ಅಧಿಕಾರ ಪಡೆದಿದ್ದು, ಅವರು ಜನರ ಬಳಿ ಬಂದು ಅವರಿಗಾಗಿರುವ ನಷ್ಟ ತುಂಬಬೇಕು. ಒಂದು ವೇಳೆ ಸರ್ಕಾರ ಪರಿಹಾರ ನೀಡಲು ತಡ ಮಾಡಿದ್ರೆ ರಾಜ್ಯ ಮಟ್ಟದಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿದ ರೈತರು, ನಾವು ಬೆಳೆ ಹಾನಿಯಿಂದ ತೀರ ಸಂಕಷ್ಟಕ್ಕೆ ಗುರಿಯಾಗಿದ್ದು ಕಡೇ ಪಕ್ಷ ಸರ್ಕಾರ ನಾವು ಬೆಳೆ ಬೆಳೆಯಲು ಖರ್ಚು ಮಾಡಿದಷ್ಟು ಹಣವನ್ನಾದರೂ ಪರಿಹಾರದ ರೂಪದಲ್ಲಿ ನೀಡಬೇಕೆಂದು ಮನವಿ ಮಾಡಿದ್ದಾರೆ.