ಬೆಂಗಳೂರು: ಪ್ರೀತಿಯಿಂದ ಕನ್ನಡ ಕಲಿಸುವ ಕೆಲಸವಾಗಬೇಕು ಹೊರತು ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ. ಜನರ ಹೃದಯದಲ್ಲಿ ಕನ್ನಡ ಭಾಷೆ ಕಲಿಯುವ ಇಚ್ಛೆ ಮೂಡಬೇಕು ಎಂದು ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಜಾಗೃತಿ ಸಮಿತಿಯ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು ಬೆಂಗಳೂರಿನ ನಹಾದೇವ ದೇಸಾಯಿ ಸಭಾಂಗಣದಲ್ಲಿ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಗುರುರಾಜ ಕರ್ಜಗಿ, ಕನ್ನಡದ ಜಾತ್ರೆಗಳು, ಉತ್ಸವಗಳು, ಕಾರ್ಯಕ್ರಮಗಳ ಕನ್ನಡದ ತೋರಣಗಳಂತೆ ಕಾಣುತ್ತವೆ. ಕನ್ನಡಕ್ಕೆ ತೋರಣದ ಜೊತೆ ಹೂರಣವೂ ಬೇಕು. ಹೀಗಾಗಿ ಕನ್ನಡ ಭಾಷೆಯ ಹೂರಣದ ಕೆಲಸವಾಗಬೇಕು ಎಂದು ತಿಳಿಸಿದರು.
Advertisement
Advertisement
ಕನ್ನಡವನ್ನು ದೈಹಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬೆಳೆಸುವ ಕೆಲಸವಾಗಬೇಕು. ಸಾಹಿತಿಗಳು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು. ಹೀಗೆ ರಚಿತಗೊಂಡ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವು ಆಗಬೇಕು. ಜೀವನ ಮಾರ್ಗಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಲು ಮುಂದಾಗುತ್ತಾರೆ. ಕನ್ನಡದಿಂದಲೂ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದು ಪೋಷಕರಿಗೆ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೊಂದು ಕನ್ನಡ ಮಾಧ್ಯಮ ಮಾದರಿ ಶಾಲೆಗಳನ್ನು ತೆರೆದು ಅಲ್ಲಿನ ಮಕ್ಕಳು ತಾಂತ್ರಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ಯಶಸ್ವಿಯಾಗುತ್ತಾರೆ ಎಂಬುದನ್ನು ಸಾಬೀತುಪಡಿಸಬೇಕು. ಆಗ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಾರೆ. ಕನ್ನಡ ಜಾಗೃತಿ ಸಮಿತಿ ಸದಸ್ಯರು ತಮ್ಮ ಊರುಗಳಲ್ಲಿ ವಾರಕ್ಕೊಂದು ಕನ್ನಡದ ಕಾರ್ಯಕ್ರಮಗಳನ್ನು ಮಾಡಿ ಜನಸಾಮಾನ್ಯರಿಗೆ ಕನ್ನಡ ಭಾಷೆಯನ್ನು ತಲುಪಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ
Advertisement
ಸಂಸ್ಕøತಿ ಚಿಂತಕ ಸುಚೇಂದ್ರ ಪ್ರಸಾದ್ ಮಾತನಾಡಿ, ಮನೋ ವಿಕೃತಿಗಳನ್ನು ತೊಡೆಯದೆ ಜಾಗೃತಿ ಆಗಲು ಸಾಧ್ಯವಿಲ್ಲ. ನಮ್ಮ ಭಾಷೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಪ್ರಾಧಿಕಾರ, ಜಾಗೃತಿ ಸಮಿತಿಗಳು ರಚನೆಗೊಂಡಲೇ ಕನ್ನಡಿಗರು ಜಾಗೃತಗೊಳ್ಳಬೇಕಿತ್ತು. ಇದಾಗದಿರುವುದು ದುರದೃಷ್ಟಕರ. ಭಾಷೆಯ ಬದ್ಧತೆಯ ಕೆಲಸಗಳನ್ನು ಮರೆತು ಅಧಿಕಾರದ ಗಾದಿಗಾಗಿ ತಾ ಮುಂದು ನಾ ಮುಂದು ಎಂದು ಮುಗಿ ಬೀಳುವಲ್ಲೇ ಹೆಚ್ಚಿನ ಮಂದಿ ನಿರತರಾಗಿರುವುದು ಬೇಸರದ ಸಂಗತಿ ಎಂದು ನುಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ, ಕನ್ನಡ ಜಾಗೃತಿ ಸಮಿತಿ ಸದಸ್ಯರು ಕನ್ನಡದ ಕಾವಲುಪಡೆಯಂತೆ ಕೆಲಸ ಮಾಡಬೇಕು. ಸದಸ್ಯರು ತಮ್ಮ ಆತ್ಮ ವಿಮರ್ಶೆ ಮಾಡಿಕೊಂಡು ಆಶಯಗಳನ್ನು ಗುರುತಿಸಿಕೊಂಡು ಕನ್ನಡದ ಕೆಲಸಗಳನ್ನು ಮಾಡಬೇಕು. ಕನ್ನಡ ಕಾಯಕ ವರ್ಷದ ಶಪಥವನ್ನು ಈಡೀರಿಸುವ ನಿಟ್ಟಿನಲ್ಲಿ ಬಹಳ ಗಟ್ಟಿತನದಿಂದ ಕನ್ನಡದ ಕಾಯಕವನ್ನು ಮಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.