– ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಡ್ರೈವರ್ಸ್
ಕೊಪ್ಪಳ: ಕೊರೊನಾ ಭೀತಿಯಲ್ಲಿ ವಾರಿಯರ್ಸ್ ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಿಬ್ಬಂದಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆಸಲ್ಲಿಸುತ್ತಿದ್ದಾರೆ. ಅವರ ಸೇವೆಗೆ ಇಡೀ ಜನಾಂಗ ಸಲಾಂ ಕೂಡ ಮಾಡುತ್ತಿದೆ. ಅದರಲ್ಲೂ 108 ಅಂಬುಲೆನ್ಸ್ ವಾಹನ ಚಾಲಕರು ಕೂಡ ಯಾವುದೇ ವಾರಿಯರ್ಸ್ ಗೂ ಕಮ್ಮಿ ಇಲ್ಲದಂತೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರ ಸೇವೆಗೆ ಸಿಗಬೇಕಾದ ಗೌರವ ಅವರಿಗೆ ಸಿಗುತ್ತಿಲ್ಲ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಅಂಬುಲೆನ್ಸ್ ವಾಹನ ಚಾಲಕರು ಸಾಕಷ್ಟು ತೊಂದರೆಗಳಲ್ಲಿ ನರಳಾಡುತ್ತಿರುವುದು ಬೆಳಕಿಗೆ ಬಂದಿದೆ.
Advertisement
ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆ ಅಲ್ಲ ಇಡೀ ರಾಜ್ಯದಲ್ಲಿ ಸೇವೆಸಲ್ಲಿಸುತ್ತಿರುವ ಅಂಬುಲೆನ್ಸ್ ಚಾಲಕರ ವ್ಯಥೆಯಾಗಿದೆ. ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿತರನ್ನು ಕರೆತರಲು ಮೊದಲು ಧಾವಿಸುವವರೇ ಅಂಬುಲೆನ್ಸ್ ಚಾಲಕರು. ಜಿಲ್ಲೆಯ ಯಾವ ಮೂಲೆಯಲ್ಲಿ ಸೋಂಕಿತ ಕಂಡು ಬಂದರೆ ಸಾಕು. ಜೀವದ ಹಂಗು ತೊರೆದು ಚಿಕಿತ್ಸೆಗಾಗಿ ಆತನ ಬಳಿಗೆ ಹೋಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಲ್ಲಿವರೆಗೆ ಸಹಕರಿಸುತ್ತಾರೆ.
Advertisement
Advertisement
ಇಷ್ಟೊಂದು ಹಗಲಿರುಳು ಶ್ರಮಿಸುತ್ತಿರುವ ಅಂಬುಲೆನ್ಸ್ ಚಾಲಕರಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಸಿಗದೇ ಇರುವುದೇ ವಿಷಾದನೀಯವಾಗಿದೆ. ಈ ಬಗ್ಗೆ ಸ್ವತಃ ಅಂಬುಲೆನ್ಸ್ ಚಾಲಕರೇ ಪಬ್ಲಿಕ್ ಟಿವಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೋವಿಡ್ ಡ್ಯೂಟಿ ಮಾಡುತ್ತಿರುವ ಅಂಬುಲೆನ್ಸ್ ಚಾಲಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ನಾನಾ ರೀತಿಯ ಸಮಸ್ಯೆಗಳಿಂದ ತೊಳಲಾಡುತ್ತಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಆಹಾರ ಪೂರೈಕೆಯಾಗುತ್ತಿಲ್ಲ, ಸ್ವಚ್ಚತೆಯ ಬಗ್ಗೆ ನೀಡಬೇಕಾದ ಸೌಲಭ್ಯಗಳು ಅವರಿಗೆ ಕಿಂಚಿತ್ತೂ ಸಿಗುತ್ತಿಲ್ಲ. ಅಲ್ಲದೆ ಅಂಬುಲೆನ್ಸ್‍ಗೆ ಯಾರು ಕೂಡ ಸ್ಯಾನಿಟೈಸ್ ಮಾಡುತ್ತಿಲ್ಲ. ಚಾಲಕರು ಮಾತ್ರ ಸ್ಯಾನಿಟೈಸ್ ಮಾಡಿಕೊಳ್ಳುತ್ತಿದ್ದಾರೆ.
Advertisement
108 ಚಾಲಕರು ಮತ್ತು ನರ್ಸ್ ಗಳಿಗೆ ಒಂದು ಕೊಠಡಿ ಕೂಡ ಇಲ್ಲವೇ ಇಲ್ಲ. ಇದರಿಂದ ಅಂಬುಲೆನ್ಸ್ ಚಾಲಕರು ತೊಂದರೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೂಡ ಇದುವರೆಗೂ ಇವರ ಬಗ್ಗೆ ಗಮನಕ್ಕೆ ತೆಗೆದುಕೊಳ್ಳದೆ ಇರುವುದರಿಂದ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ. ಒಟ್ಟಿನಲ್ಲಿ ಆರೋಗ್ಯ ಇಲಾಖೆ ಎಚ್ಚೆತ್ತು ಅಂಬುಲೆನ್ಸ್ ಚಾಲಕರತ್ತ ಗಮನ ಹರಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.