– ಎಣ್ಣೆಗಾಗಿ 1 ಕಿ.ಮೀ.ಗಟ್ಟಲೇ ಕ್ಯೂ
– ಮದ್ಯದಂಗಡಿಗೆ ದಿನಕ್ಕೆ 500 ಟೋಕನ್ ಮಾತ್ರ
ಚೆನ್ನೈ: ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಡೆಹಿಡಿದ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಮದ್ಯದಂಗಡಿಯನ್ನು ಮತ್ತೆ ಓವನ್ ಮಾಡಲು ಆದೇಶ ಹೊರಡಿಸಿದೆ. ಇದರಿಂದಾಗಿ ಫುಲ್ ಖುಷಿಯಾದ ಮದ್ಯ ಪ್ರಿಯರು ಕಿ.ಮೀ.ಗಟ್ಟಲೇ ಕ್ಯೂ ನಿಂತು ಎಣ್ಣೆ ಖರೀದಿಸಿದ್ದಾರೆ. ಕೆಲವಡೆ ಸರದಿಯಲ್ಲಿ ನಿಲ್ಲುವ ಬದಲು ಸಾಲಿನಲ್ಲಿ ಚಪ್ಪಲಿ ಇಟ್ಟು ಗುಂಪುಗೂಡಿ ನಿಂತ ದೃಶ್ಯಗಳು ಕಂಡು ಬಂದವು.
ತಮಿಳುನಾಡಿನಲ್ಲಿ ಸರ್ಕಾರಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು. ಹೀಗಾಗಿ ರಾಜ್ಯ ಸರ್ಕಾರವು ಇಂದಿನಿಂದ ಸರ್ಕಾರಿ ಸ್ವಾಮ್ಯದ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (ಟ್ಯಾಸ್ಮಾಕ್) ಮದ್ಯದಂಗಡಿಗಳನ್ನು ಮತ್ತೆ ತೆರೆಯುವ ಆದೇಶವನ್ನು ಶುಕ್ರವಾರ ನೀಡಿತ್ತು. ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಚೆನ್ನೈ, ತಿರುವಳ್ಳೂರು, ಮಾಲ್‍ಗಳು ಮತ್ತು ಕಂಟೈನ್‍ಮೆಂಟ್ ವಲಯಗಳಲ್ಲಿ ಮದ್ಯ ಮಾರಾಟವನ್ನು ತಮಿಳುನಾಡು ನಿರ್ಬಂಧಿಸಿದೆ.
Advertisement
Advertisement
ಮದ್ಯದಂಡಿಗಳನ್ನು ತೆರೆಲು ಸರ್ಕಾರ ಆದೇಶ ನೀಡುತ್ತಿದ್ದಂತೆ ಎಣ್ಣೆ ಪ್ರಿಯರು ಫುಲ್ ಖುಷ್ ಆಗಿದ್ದರು. ಇಂದು ಮದ್ಯದಂಗಡಿ ತೆರೆಯುವುದಕ್ಕೂ ಮುನ್ನವೇ ಕುಡುಕರು ಕಿ.ಮೀ.ಗಟ್ಟಲೇ ಕ್ಯೂ ನಿಂತಿದ್ದಾರೆ. ಬಿರು ಬಿಸಿಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಕೆಲವೆಡೆ ಸರದಿ ಸಾಲಿನಲ್ಲಿ ಚಪ್ಪಲಿ ಬಿಟ್ಟು ಗುಂಪುಗೂಡಿ ನೆರಳಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.
Advertisement
ತಮಿಳುನಾಡು ಸರ್ಕಾರದ ಆದೇಶದ ಪ್ರಕಾರ, ಮದ್ಯದಂಗಡಿ ಮಾರಾಟಗಾರರು ಟೋಕನ್ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ. ನಿರ್ದಿಷ್ಟ ಅಂಗಡಿಗೆ ಪ್ರತಿದಿನ 500 ಟೋಕನ್‍ಗಳನ್ನು ಮಾತ್ರ ನೀಡಲಾಗುತ್ತದೆ. ಮದ್ಯವನ್ನು ಖರೀದಿಸಲು ಬಯಸುವ ಜನರು ಮಾಸ್ಕ್ ಧರಿಸವು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್-19 ಹರಡದಂತೆ ಎಲ್ಲಾ ನಿಯಮಗಳನ್ನು ಅನುಸರಿಸಲು ಬದ್ಧರಾಗಿರಬೇಕು.
Advertisement
ಕೋವಿಡ್-19 ಹರಡದಂತೆ ಘೋಷಿಸಲಾದ ನಿಯಮಗಳನ್ನು ಮದ್ಯ ಖರೀದಿಯ ವೇಳೆ ಉಲ್ಲಂಘಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟ್ಯಾಸ್ಮಾಕ್ ಸಂಸ್ಥೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಎಲ್.ನಾಗೇಶ್ವರ ರಾವ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯಪೀಠವು ಶುಕ್ರವಾರ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಡೆಯಿತು. ಈ ಮೂಲಕ ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟವನ್ನು ಪುನಃ ತೆರೆಯಲು ದಾರಿ ಮಾಡಿಕೊಟ್ಟಿದೆ.