– ಅಧಿವೇಶನದಲ್ಲಿ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ
– ಸಿಎಂ ನಾಪತ್ತೆ ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು
ಬೆಂಗಳೂರು: ಸಮುದಾಯದ ಹೆಸರು ಹೇಳಿ ಸಿಎಂ ಆದವರಿಗೆ ಸಮಾಜದ ಕಳಕಳಿ ಇಲ್ಲ ಎಂದು ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗುರ ಉಂಟು ಮಾಡಿದರು.
ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್ ಅವಕಾಶ ಕೇಳಿದರು. ಆದ್ರೆ ಸ್ಪೀಕರ್ ಕೊನೆಯಲ್ಲಿ ಸಮಯ ನೀಡುತ್ತೇನೆಂದಾಗ ಕೋಪಗೊಂಡ ಯತ್ನಾಲ್ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮೊದಲೇ ನೀವೇ ಮಾತನಾಡಿ. ಸಿಎಂ ಬಂದ ನಂತರ ನಾನು ಮಾತನಾಡುತ್ತೇನೆ ಎಂದರು.
ಸಿಎಂ ಯಡಿಯೂರಪ್ಪ ನಿನ್ನೆ ಮಾತನಾಡ್ತೀನಿ ಅಂತ ಹೊರಗಡೆ ಹೇಳಿದ್ದರು. ಆದ್ರೆ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ. ನಮ್ಮ ಸಮಾಜದ ಹೆಸರೇಳಿಕೊಂಡು ಸಿಎಂ ಆ ಖುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಸಿಎಂ ಉತ್ತರ ಕೊಡ್ತಿಲ್ಲ ಅಂದರೆ ನಾಪತ್ತೆ ಆಗಿದ್ದಾರೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಸಿಎಂ ನಾಪತ್ತೆ ಆಗಿದ್ದಾರೆಂದು ಹೇಳಬಾರದು ಎಂದಾಗ ಇಬ್ಬರ ನಡುವೆ ವಾಕ್ಸಮರ ಏರ್ಪಟಿತು.
ಶೈಕ್ಷಣಿಕ ಸಾಮಾಜಿಕವಾಗಿ ಹಲವು ಸಮುದಾಯಗಳಿಗೆ ಮೀಸಲಾತಿ ಸಿಕ್ಕಿಲ್ಲ. ರಾಜ್ಯದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಬೇಕಾಗಿದೆ. ಸಣ್ಣ ಸಣ್ಣ ಸಮುದಾಯಗಳಿಗೆ ಅವರನ್ನು ಪ್ರತಿನಿಧಿಸುವವರೇ ಇಲ್ಲದೆ ಅನ್ಯಾಯ ಆಗ್ತಿದೆ. ಪಂಚಮಸಾಲಿ ಸಮುದಾಯ ಸಹ ಹಿಂದುಳಿದ ವರ್ಗಕ್ಕೆ ಸೇರಬೇಕು ಎಂಬುದು 25 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದೆ. ಎಸ್‍ಎಂ ಕೃಷ್ಣ ಕಾಲದಲ್ಲಿ ಹಿಂದುಳಿದ ವರ್ಗಕ್ಕೆ ಅಧ್ಯಯನಕ್ಕೆ ಸೂಚಿಸಿದ್ದರು. ಪಂಚಮಸಾಲಿ ಸಮುದಾಯ ಎಲ್ಲಿಯೂ ತಮ್ಮ ಜಾತಿ ಹೆಸರು ಬರೆದಿಲ್ಲ. ವೀರಶೈವ ಲಿಂಗಾಯತ ಅಂತಲೇ ಬರೆದುಕೊಂಡು ಬಂದಿದ್ದರಿಂದ ಕೇಂದ್ರ ಓಬಿಸಿ ಪಟ್ಟಿಗೂ ಸೇರಿಸಿಲ್ಲ.
ಸಿಎಂ ನೇರವಾಗಿ ಉತ್ತರ ನೀಡಲಿ: ನಮ್ಮ ಸಮುದಾಯಕ್ಕೆ ಸಿಎಂ ಯಡಿಯೂರಪ್ಪ ಹಿಂದೆ ಆಶ್ವಾಸನೆ ಕೊಟ್ಟಿದ್ದರು. ವೀರಶೈವ ಲಿಂಗಾಯತ ಇತಿಹಾಸದಲ್ಲಿ 10 ಲಕ್ಷ ಜನ ಸೇರಿ ಹೋರಾಟ ಮಾಡಿದ್ದು ಇದೇ ಮೊದಲು ಪಂಚಮಸಾಲಿ ಅಂದ್ರೆ ಕೊನೆ ಸಾಲಿನಲ್ಲಿರುವವರು ನಾವು. ನಮ್ಮ ಸಮುದಾಯ ಬಹಳಷ್ಟು ಹಿಂದುಳಿದಿದೆ. ನಮ್ಮ ಸಮುದಾಯ ವಿಚಾರದಲ್ಲಿ ಸರ್ಕಾರದಿಂದ ಬಹಳ ಕೆಟ್ಟ ಸಂದೇಶ ಹೋಗ್ತಾ ಇದೆ. ಸಿಎಂ ಯಡಿಯೂರಪ್ಪಗೆ ನಮ್ಮ ಸಮುದಾಯದ ದೊಡ್ಡ ಮತ ನೀಡಿದೆ. ನಮಗೆ ಬೇರೆ ಯಾವುದೇ ಮಂತ್ರಿಗಳ ಉತ್ತರ ಕೊಡಬೇಕಾಗಿಲ್ಲ. ಸ್ವತಃ ಸಿಎಂ ನೇರವಾಗಿ ಉತ್ತರ ಕೊಡಬೇಕು. ಇಲ್ಲದಿದ್ದರೆ ಸದನದ ಒಳಗೆ ನಾನು ಹೋರಾಟ ಮಾಡ್ತೇನೆ. ಅಲ್ಲಿ ಸಮಾಜದವರು ಹೋರಾಟ ಮಾಡ್ತಾರೆ. ಸ್ಪೀಕರ್ ಗೂ ಕೂಡ ನಮಗೆ ಮಾತನಾಡುವುದಕ್ಕೆ ಅವಕಾಶ ಕೊಡಬಾರದು ಎಂಬ ಒತ್ತಡ ಇತ್ತು ಅನ್ಸುತ್ತೆ ಎಂದರು. ನಮ್ಮನ್ನು ಈ ವಿಷಯದಲ್ಲಿ ಎಳೆದು ತರಬೇಡಿ ಎಂದು ಸ್ಪೀಕರ್ ಸೂಚಿಸಿದರು.
ನಾನೇನು ಹಾದಿ ಬೀದಿಯಲ್ಲಿ ಹೋಗುವವನಲ್ಲ. ವಾಜಪೇಯಿ ಸರ್ಕಾರದಲ್ಲಿ ಸಚಿವನಾಗಿದ್ದೆ. ಸಮುದಾಯದ ವಿಚಾರದಲ್ಲಿ ಮಾತನಾಡುವಾಗ ರೇಣುಕಾಚಾರ್ಯ ಯಾಕೆ ಅಡ್ಡಿ ಮಾಡ್ತಾರೆ ಸಿಎಂ ಉತ್ತರ ಕೊಡದೇ ಹೋದರೆ ನಾಳೆಯಿಂದ ಶಿವರಾತ್ರಿ ಆಮರಾಣಾಂತ ಉಪವಾಸ ಶುರು ಮಾಡ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.