ಚಾಮರಾಜನಗರ: ಬೈಕ್, ಟಿವಿ, ಫ್ರಿಡ್ಜ್ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಸಚಿವ ಉಮೇಶ್ ಕತ್ತಿ ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ, ಆದರೆ ಈ ಬಗ್ಗೆ ಅವರೊಡನೆ ಖುದ್ದಾಗಿ ಮಾತನಾಡುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಎಲ್ಲರ ಮನೆಯಲ್ಲೂ ಟಿವಿ ಇರೋದು ಸರ್ವೇ ಸಾಮಾನ್ಯ, ಸಮಾಜದ ಕಟ್ಟ ಕಡೆಯ ಕುಟುಂಬದ ಮಗುವು ಚಂದನ ವಾಹಿನಿ ನೋಡಿದೆ. ಸಂವೇದ ಕಾರ್ಯಕ್ರಮ ವೀಕ್ಷಿಸಿ ಪಾಠ ಕಲಿತಿದೆ ಎಂದು ಹೇಳಿದ್ದಾರೆ.
ಬಡವರ ಮೇಲೆ ಬರೆ ಹಾಕಿ ಯಾವ ಸರ್ಕಾರ ಖುಷಿ ಪಡಲ್ಲ ಎಂದಿದ್ದಾರೆ. ಬಡವರ ಹೊರೆ ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಇಳಿಕೆ ಮಾಡುವುದೇ ಸರ್ಕಾರದ ಉದ್ದೇಶವಾಗಿದ್ದು, ಬೆಲೆ ಏರಿಕೆ ಮಾಡಿ ಬೊಕ್ಕಸ ತುಂಬಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಹೇಳಿದ್ದಾರೆ.
ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ದರ ಕಡಿಮೆಯಾದಾಗ ಯಾರೂ ಕೂಡ ಮಾತನಾಡಿಲ್ಲ. ಜಾಸ್ತಿ ಆದಾಗ ಮಾತನಾಡುವುದು ಸಹಜವಾಗಿದೆ. ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್ ಕೂಡ ಬೆಲೆ ಇಳಿಕೆ ಆಗುತ್ತದೆ ಎಂದು ಹೇಳಿದ್ದಾರೆ ನೋಡೋಣ ಎಂದು ಹೇಳಿದ್ದಾರೆ.
ಆದೇಶ ರದ್ದು ವಾಪಸ್:
ಬೈಕ್, ಟಿವಿ, ಫ್ರಿಡ್ಜ್ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಹೇಳಿಕೆ ನೀಡಿದ್ದ ಸಚಿವ ಕತ್ತಿ ಇದೀಗ ಈ ಆದೇಶವನ್ನು ವಾಪಸ್ ಪಡೆದಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕತ್ತಿ, ಬಿಪಿಎಲ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ. ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ಕತ್ತಿ ಸ್ಪಷ್ಟನೆ ನೀಡಿದ್ದಾರೆ.