– ಚಂದ್ರಶೇಖರ್ ನೌಕರರ ದಾರಿ ತಪ್ಪಿಸ್ತಿದ್ದಾರೆ
ಶಿವಮೊಗ್ಗ: ಸಾರಿಗೆ ನೌಕರರು ಕಳೆದ 4 ದಿನದಿಂದ ನಡೆಸುತ್ತಿರುವ ಮುಷ್ಕರಕ್ಕೆ ಸರ್ಕಾರ ಸ್ಪಂದಿಸಿ ಅವರ 9 ಬೇಡಿಕೆಗಳನ್ನು ಈಡೇರಿಸಿದೆ. ಆದರೂ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಮಾತನ್ನು ನಂಬಿ ಹಾಳಾಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೋಡಿಹಳ್ಳಿ ಚಂದ್ರಶೇಖರ್ ಎರಡು ತಲೆ ಹಾವು ಇದ್ದಂತೆ. ಹಾಗಾಗಿ ಇಂತಹ ವ್ಯಕ್ತಿಗಳನ್ನು ಸಂಘಟನೆಗಳಾಗಲಿ, ರಾಜ್ಯದ ಜನರಾಗಲಿ ನಂಬಬಾರದು. ನಾಯಕರು ಎಂದು ಮುಂದೆ ಬಂದು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಇಂತಹವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಈಶ್ವರಪ್ಪ ಕೋಡಿಹಳ್ಳಿ ವಿರುದ್ಧ ಹರಿಹಾಯ್ದರು.
ಒಂದು ವೇಳೆ ಎಸ್ಮಾ ಜಾರಿಯಾದರೆ ಗತಿ ಏನು. ನೌಕರರ ಕುಟುಂಬಕ್ಕೆ ಕೋಡಿಹಳ್ಳಿ ಜವಾಬ್ದಾರರು ಆಗುತ್ತಾರಾ ಎಂದು ಪ್ರಶ್ನಿಸಿದರು. ಕೋಡಿಹಳ್ಳಿ ಹಿಂದೆ ಮತ್ತೆ ಯಾರಿದ್ದಾರೋ ಗೊತ್ತಿಲ್ಲ. ಸಮಯ ಬಂದಾಗ ತಿಳಿಸುತ್ತೇನೆ. ವೈಯಕ್ತಿಕ ಪ್ರತಿಷ್ಠೆಯನ್ನು ಕಾರ್ಮಿಕರ ಮೇಲೆ ಹೇರುವ ಮೂಲಕ ರಾಜ್ಯದ 6 ಕೋಟಿ ಜನರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಈ ಮುಷ್ಕರದಲ್ಲಿ ಕೋಡಿಹಳ್ಳಿ ಭಾಗವಹಿಸುವ ಮೂಲಕ ನೌಕರರ ಯೂನಿಯನ್ ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದರು.
ಸಮಾಜಘಾತುಕ ಶಕ್ತಿಗೆ ಉದಾಹರಣೆಯೇ ಕೋಡಿಹಳ್ಳಿ ಚಂದ್ರಶೇಖರ್. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು ಕೋಡಿಹಳ್ಳಿ ಮಾಡುತ್ತಿದ್ದಾರೆ. ನೌಕರರು ಕರ್ತವ್ಯಕ್ಕೆ ಹಾಜರಾಗಲು ಮುಂದಾದರೆ ಕೋಡಿಹಳ್ಳಿ ನೌಕರರಿಗೆ ದಾರಿ ತಪ್ಪಿಸುತ್ತಿದ್ದಾರೆ. ನೌಕರರಿಗೆ ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಇಲ್ಲವಾ..? ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸುವುದು ಒಳ್ಳೆಯದಲ್ಲ. ಕೋಡಿಹಳ್ಳಿ ಮಾತು ಕೇಳಿದರೆ ನಿಮ್ಮ ಯೂನಿಯನ್ ಒಡೆದು ಹೋಗುತ್ತೆ. ನೌಕರರು ಹಾಳಾಗುತ್ತಾರೆ. 6 ಕೋಟಿ ಜನರಿಗೂ ತೊಂದರೆ ಆಗುತ್ತೆ. ಈಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವರು ನೌಕರರಿಗೆ ಮನವಿ ಮಾಡಿದರು.