ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾರ್ನಿಂಗ್ ನೀಡಿದ್ದಾರೆ.
ಸತೀಶ್ ರೆಡ್ಡಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇನ್ನೂ ಕೃತ್ಯದ ಹಿಂದೆ ಬೇರೆ ಯಾವುದಾದರೂ ಷಡ್ಯಂತ್ರ ಇರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಸತೀಶ್ ರೆಡ್ಡಿಗೆ ಮತ್ತಷ್ಟು ಭದ್ರತೆವಹಿಸಿ ಎಚ್ಚರಿಕೆಯಿಂದ ಇರಲು ಪೊಲೀಸರು ಸೂಚನೆ ನೀಡಿದ್ದಾರೆ. ಹಾಗಾಗಿ ಮನೆಯ ಆವರಣದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ಅಪರಿಚಿತರು ಭೇಟಿಗೆ ಮನೆಯ ಬಳಿ ಬರುವುದನ್ನು ನಿಷೇಧ ಹೇರಲಾಗಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!
ಇಂದು ಸತೀಶ್ ರೆಡ್ಡಿ ಮನೆಗೆ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಧೈರ್ಯ ಹೇಳಿದ್ದು, ಈ ಸಮಾಜಘಾತುಕ ಕೃತ್ಯದ ಹಿಂದೆ ಯಾರೇ ಇದ್ರು ಸಹ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಮಂಗಳೂರಿನ ಕಬಕ ಗ್ರಾಮಪಂಚಾಯತ್ ನಲ್ಲಿ ಸ್ವಾತಂತ್ರೋತ್ಸವದ ರಥದಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಎಸ್‍ಡಿಪಿಐ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿ, ಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಒತ್ತಡ ಹೇರಲು ಅವರು ಯಾರು ಎಂದು ಪ್ರಶ್ನಿಸಿದ್ದು, ಈ ಘಟನೆ ಖಂಡನಾರ್ಹವಾಗಿದ್ದು ಈಗಾಗಲೇ ಎಸ್‍ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.