– ಆಶ್ರಮದಲ್ಲಿ ಪತ್ತೆಯಾದ ಸಿಡಿಯಲ್ಲಿ ಸೆಕ್ಸ್ ವಿಡಿಯೋ
ಭೋಪಾಲ್: ಮಾಂತ್ರಿಕ ಶಕ್ತಿಗಳ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ವ್ಯಕ್ತಿಯೊಬ್ಬ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ನರಸಿಂಗ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಧರ್ಮೇಂದ್ರ ದಾಸ್ ಅಲಿಯಾಸ್ ಧರ್ಮೇಂದ್ರ ದುಬೆ (35) ಎಂದು ಗುರುತಿಸಲಾಗಿದೆ. ಈತನನ್ನು ಈಗಾಗಲೇ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧಿಸಿದ ನಂತರ ಮೂವರು ಮಹಿಳೆಯರು ಪೊಲೀಸ್ ಠಾಣೆಗೆ ಬಂದು ದುಬೆ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿ ಮಾಂತ್ರಿಕ ಶಕ್ತಿಗಳ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತೇನೆ ಎಂದು ನಂಬಿಸಿ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಬ್ಬರು ಅಪ್ರಾಪ್ತ ಸಹೋದರಿಗೂ ಸಹ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಒಟ್ಟು ನಾಲ್ಕು ಎಫ್‍ಐಆರ್ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿ ದುಬೆ ಮದುವೆಯಾಗಿದ್ದು, ಮಗು ಕೂಡ ಇದೆ. ಈತ ತನ್ನ ಮನೆಯ ಆವರಣದಲ್ಲಿ ಒಂದು ಸಣ್ಣ ಆಶ್ರಮವನ್ನು ನಿರ್ಮಿಸಿಕೊಂಡಿದ್ದು, ಸ್ವಯಂ ದೇವಮಾನವ ಎಂದು ಘೋಷಿಸಿಕೊಂಡಿದ್ದನು. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಕಳೆದ ವಾರ ಆತ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ತಕ್ಷಣ ಪೊಲೀಸರು ಆತನ ಮನೆಯಲ್ಲಿ ದಾಳಿ ನಡೆಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವೇಳೆ ಆರೋಪಿ ದುಬೆ ಆಶ್ರಮದಲ್ಲಿ ಎರಡು ಕಿಲೋಗ್ರಾಂಗಳಷ್ಟು ಗಾಂಜಾ ಪತ್ತೆಯಾಗಿದೆ. ಅಲ್ಲದೇ ಸಿಡಿಗಳು, ಫೋಟೋಗಳು ಪತ್ತೆಯಾಗಿದ್ದು, ಎಲ್ಲವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಆರೋಪಿ ದುಬೆ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಲಾಗಿದೆ. ಆದರೆ ಬಂಧಿಸಿದ ನಂತರ ಮೂವರು ಮಹಿಳೆಯರು ಆತನ ವಿರುದ್ಧ ಅತ್ಯಾಚಾರ ಮತ್ತು ಕಿರುಕುಳದ ದೂರುಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೊಹಂತಿ ಮರವಿ ತಿಳಿಸಿದರು.
ಕಳೆದ ಐದು ವರ್ಷಗಳಿಂದ ದುಬೆ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಆಶ್ರಮದಿಂದ ವಶಪಡಿಸಿಕೊಂಡ ಸಿಡಿಗಳಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದ ವಿಡಿಯೋಗಳು ಪತ್ತೆಯಾಗಿವೆ. ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅನೇಕ ತಿಂಗಳುಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದನು. ಆದರೆ ಮಹಿಳೆಯರು ಭಯದಿಂದ ದೂರು ನೀಡಿರಲಿಲ್ಲ. ಸದ್ಯಕ್ಕೆ ವಿಡಿಯೋ ಮೂಲಕ ಸಂತ್ರಸ್ತೆಯರ ಕುಟುಂಬಗಳನ್ನು ಸಂಪರ್ಕಿಸಿ ದೂರು ನೀಡುವಂತೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.