ಬೆಂಗಳೂರು: ಕೋವಿಡ್ ಮೊದಲ ಅಲೆ ಹಾಗೂ ಎರಡನೇ ಅಲೆ ಎರಡರಲ್ಲೂ ಬೆಡ್ ಗಳ ಸಮಸ್ಯೆ, ಆಕ್ಸಿಜನ್ ಸಮಸ್ಯೆಗಳು ಉಂಟಾಗಿವೆ. ಅದರಲ್ಲೂ ಐಸಿಯು ಬೆಡ್ ಸಿಗದೇ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಸಮರ್ಪಕ ಸೇವಾ ಟ್ರಸ್ಟ್ ವತಿಯಿಂದ ಚಾರಿಟೇಬಲ್ ಆಸ್ಪತ್ರೆಗಳಿಗೆ ಸಹಾಯ ಹಸ್ತ ಚಾಚಲಾಗುತ್ತಿದೆ.
ಬೆಂಗಳೂರಿನ ವಿವಿಧ ಐದು ಚಾರಿಟೇಬಲ್ ಆಸ್ಪತ್ರೆಗಳಿಗೆ 35ಕ್ಕೂ ಹೆಚ್ಚು ಐಸಿಯು ಹಾಗೂ ವೆಂಟಿಲೇಟರ್ ಬೆಡ್ ಗಳನ್ನು ಕೊಡುಗೆಯಾಗಿ ನೀಡಿದೆ. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಬೆಡ್ ಗಳ ತಯಾರಿಸಲಾಗಿದೆ. ಅಷ್ಟೇ ಅಲ್ಲದೇ ವಿವಿಧ ಆಸ್ಪತ್ರೆ ಹಾಗೂ ಆಕ್ಸಿಜನ್ ಬ್ಯಾಂಕ್ ಗಳಿಗೆ 200 ಆಕ್ಸಿಜನ್ ಕಾನ್ಸ್ ಟೇಟರ್ಸ್ ಗಳನ್ನು ನೀಡಿದ್ದಾರೆ.
ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಹಿನ್ನೆಲೆ ವಿವಿಧ ಹಳ್ಳಿಗಳಲ್ಲಿ 25 ಸಾವಿರ ಮಾಸ್ಕ್ ವಿತರಣೆ ಮಾಡಿದ್ದಾರೆ. ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಸುಮಾರು 5 ಸಾವಿರ ರೇಶನ್ ಕಿಟ್ ಹಾಗೂ ಎರಡು ಸಾವಿರ ಮೆಡಿಕಲ್ ಕಿಟ್ ಗಳ ಹಂಚಿಕೆ ಮಾಡಿದ್ದಾರೆ. ಜೊತೆಗೆ ಪ್ರತಿದಿನ 200 ಪೋಲಿಸ್ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಮೂರು ಹೊತ್ತಿನ ಉಚಿತ ಊಟ ನೀಡುತ್ತಿದ್ದಾರೆ. ಹಾಗೆಯೇ ಕೊರೋನಾದಿಂದ ಮೃತಪಟ್ಟವರಿಗೆ 15 ಸಾವಿರ ರೂಪಾಯಿ ಧನ ಸಹಾಯ ಮಾಡುತ್ತಿದ್ದಾರೆ.
ಇಂದು ಜಯನಗರದ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ಒಂದು ಎಬಿಜಿ ಮಿಶನ್, ಐದು ಕಾರ್ಡಿಯಕ್ ಮಾನಿಟರ್ ಗಳು ಸೇರಿದಂತೆ ಹಲವು ಮಿಶನ್ ಗಳ ಕೊಡುಗೆ ನೀಡಿದ್ದಾರೆ.