ವಿಜಯಪುರ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವಾಗಲೇ ಕೆಲ ಅಧಿಕಾರಿಗಳು ಮೊಬೈಲ್‍ನಲ್ಲಿ ಮಗ್ನವಾಗಿದ್ದರೆ, ಇನ್ನೂ ಕೆಲವರು ನಿದ್ದೆಗೆ ಜಾರಿದ್ದರು. ಇದನ್ನು ಗಮನಸಿದ ಜಿಲ್ಲಾ ಉಸ್ತುವಾರಿ ಸಚಿವೆಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಗರಂ ಆಗಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಜಿ.ಪಂ. ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗಿ ಆಗಿದ್ದರು. ಪ್ರಮುಖ ವಿಷಯಗಳು ಚರ್ಚೆ ಆಗುವ ವೇಳೆ ಸರ್ವೆ ಇಲಾಖೆ ಅಧಿಕಾರಿ ಮೊಬೈಲ್ ನಲ್ಲಿ ಫುಲ್ ಬ್ಯೂಸಿ ಆಗಿದ್ದರು. ಇದನ್ನು ಗಮನಿಸಿದ ಸಚಿವೆ ಶಶಿಕಲಾ ಜೊಲ್ಲೆ, ಅಧಿಕಾರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಗಂಭೀರ ಚರ್ಚೆ ನಡೆಯುತ್ತಿರುವಾಗ ನೀವೇನು ಸಭೆಯಲ್ಲಿ ಮೊಬೈಲ್ ನಲ್ಲಿ ಬ್ಯೂಸಿ ಇದ್ದೀರಾ ಎಂದು ಪ್ರಶ್ನಿಸಿದರು. ಇಂತಹ ಮೀಟಿಂಗ್ ನಲ್ಲೇ ನೀವು ಬ್ಯೂಸಿ ಇದ್ದೀರಾ, ಇನ್ನು ಜನರಿಗೆ ನಿವೇನು ನ್ಯಾಯ ಒದಗಿಸುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಸಭೆಯಲ್ಲಿ ನಿದ್ದೆಗೆ ಜಾರಿದ್ದರು.
ನಂತರ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಬೇಸಿಗೆ ಬರುತ್ತಿದೆ, ಕೂಡಲೇ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಆಗದಂತೆ ಗಮನ ಹರಿಸಲು ಸಚಿವರು ಸೂಚಿಸಿದರು.