ಶಿವಮೊಗ್ಗ: ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಕಾಮಗಾರಿ ಕುರಿತಂತೆ ಮೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಂಭಾಗಣಕ್ಕೆ ಕಾಮಗಾರಿಯಲ್ಲಿ ಅಳವಡಿಸಿರುವ ಕಳಪೆ ವಸ್ತುಗಳ ಜೊತೆಗೆ ಸಭೆಗೆ ಆಗಮಿಸಿದ ಸಚಿವ ಈಶ್ವರಪ್ಪನವರು, ಯೋಜನೆಯಡಿ ಅಳವಡಿಸಿರುವ ಕಳಪೆ ವಸ್ತುಗಳನ್ನು ಅಧಿಕಾರಿಗಳ ಎದುರು ಪ್ರದರ್ಶಿಸಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ಮಾಡಿದ್ದಾರೆ.
ನಿರಂತರ ಯೋಜನೆಯಡಿ ಕಳಪೆ ಕಾಮಗಾರಿ ನಡೆದಿದೆ ಎಂಬುದನ್ನು ನಾನು ಸಾಕ್ಷಿ ಸಮೇತ ನಿಮ್ಮ ಮುಂದೆ ಇಟ್ಟಿದ್ದೇನೆ. ಗುತ್ತಿಗೆದಾರ ಕಳಪೆ ವಸ್ತುಗಳನ್ನು ಬಳಸುವಾಗ ನೀವೆಲ್ಲಾ ಏನು ಮಾಡುತ್ತಿದ್ದೀರಿ? ಕಣ್ಣು ಮುಚ್ಚಿಕೊಂಡು ಕುಳಿತಿದ್ರಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡಿ ಕಾಮಗಾರಿ ನಡೆಸುತ್ತಿದೆ. ಕಾಮಗಾರಿ ನಡೆಯುತ್ತಿದೆ ಎಂದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದವರು ಯಾರು? ಇದನ್ನೆಲ್ಲಾ ಗಮನಿಸುವುದು ನಿಮ್ಮ ಕರ್ತವ್ಯ ತಾನೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಗುತ್ತಿಗೆದಾರ ಟೆಂಡರ್‍ನಲ್ಲಿ ಉಲ್ಲೇಖಿಸಿರುವ ಸಾಮಾಗ್ರಿಗಳನ್ನು ಕಾಮಗಾರಿಯಲ್ಲಿ ಬಳಸಿಲ್ಲ. ಅದರಲ್ಲೂ ಸಾಮಾಗ್ರಿಗಳನ್ನು ಹಾಕದೇ ಬಿಲ್ ಕೂಡಾ ಮಾಡಿಸಿಕೊಂಡಿದ್ದಾನೆ. ಈ ಬಗ್ಗೆ ಆತನನ್ನು ಯಾರು ಪ್ರಶ್ನೆ ಮಾಡಬೇಕು. ನೀವು ಸರಿಯಿದ್ದರೆ ಇದೆಲ್ಲಾ ನಡೆಯಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅವರು ಈ ಕಾಮಗಾರಿಯನ್ನು ಕೂಡಲೇ ಪರಿಶೀಲಿಸಿ, ತನಿಖೆ ನಡೆಸಿ 15 ದಿನಗಳೊಳಗೆ ವರದಿ ನೀಡಬೇಕು. ಈ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಎಲ್ಲೆಲ್ಲಿ ಕಾಮಗಾರಿ ನಡೆಸಿದ್ದಾನೆ ಎಂಬುದನ್ನು ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.