– ಸಭಾಪತಿ ಇದ್ದಾಗ, ಉಪಸಭಾಪತಿ ಹೇಗೆ ಬಂದ್ರು
– ಸಭಾಪತಿ ಒಳ ಬರದಂತೆ ಬಾಗಿಲು ಹಾಕಿದ್ದು ಕ್ರಿಮಿನಲ್ ಅಫೆನ್ಸ್
ಬೆಂಗಳೂರು: ಸಭಾಪತಿ ಇದ್ದಾಗಲೇ ಉಪಸಭಾಪತಿ ಹೇಗೆ ಬಂದರು? ಸಭಾಪತಿಗಳು ಸಭೆಗೆ ಆಗಮಿಸದಂತೆ ಲಾಕ್ ಮಾಡಿದರಲ್ಲ ಬಿಜೆಪಿಯವರು ಎಂಥ ಗೂಂಡಾಗಳಿರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ವಿಧಾನ ಪರಿಷತ್‍ನಲ್ಲಿ ನಡೆದ ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಿಸಿದ ಅವರು, ವಿಧಾನ ಪರಿಷತ್‍ನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಕೆಳಮನೆಯಲ್ಲಿ ಸ್ಪೀಕರ್, ಮೇಲ್ಮನೆಯಲ್ಲಿ ಪರಿಷತ್ ಸಭಾಪತಿ ಇರುತ್ತಾರೆ. ಇವರು ಇದ್ದಾಗ ಉಪಸಭಾಪತಿ ಅಥವಾ ಉಪಾಧ್ಯಕ್ಷರು ಬರಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅಲ್ಲದೆ ಅಧ್ಯಕ್ಷ ವಿದೇಶ ಪ್ರವಾಸಕ್ಕೆ ಹೋದಾಗ, ಅನಾರೋಗ್ಯ ಆದಾಗ ಅಥವಾ ಇನ್ಯಾವುದೋ ತುರ್ತು ಸಂದರ್ಭದಲ್ಲಿ ಸಭಾಪತಿ ಅವರು ಉಪಸಭಾಪತಿಗೆ ಸಭೆ ನಡೆಸುವಂತೆ ಸೂಚಿಸುತ್ತಾರೆ. ಆಗ ಮಾತ್ರ ಉಪಸಭಾಪತಿ ಸಭೆ ನಡೆಸಬೇಕು ಎಂದು ವಿವರಿಸಿದರು.
ರೂಲ್ಸ್ ಕಮಿಟಿಯವರು ರೂಲ್ಸ್ ಮಾಡುತ್ತಾರೆ. ಡಿಸೆಂಬರ್ 10ರಂದು ಗುರುವಾರ ಸಭಾಪತಿ ಸದನ ನಡೆಸಿದ್ದಾರೆ. ಗೋಹತ್ಯಾ ನಿಷೇಧದ ಬಿಲ್ ತರಲು ಹೇಳಿದ್ದಾರೆ. ನಾಳೆ ತರುತ್ತೇವೆ ಎಂದು ಸಭಾನಾಯಕರು ಹೇಳಿದ್ದಾರೆ. ಬಳಿಕ ಬಿಸೆನೆಸ್ ಮುಗಿದಿದೆ ಎಂದು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ. ನಂತರ ಅವಿಶ್ವಾಸ ನಿರ್ಣಯ ಕ್ರಮಬದ್ಧವಾಗಿರಲಿಲ್ಲ ಎಂದು ಅವಿಶ್ವಾಸ ನಿರ್ಣಯ ನೋಟಿಸ್ ರಿಜೆಕ್ಟ್ ಮಾಡಿದ್ದಾರೆ. ಒಮ್ಮೆ ರಿಜೆಕ್ಟ್ ಮಾಡಿದ ಮೇಲೆ ಮುಗಿಯಿತು. ಮತ್ತೆ ಅಜೆಂಡಾಗೆ ಸೇರಿಸಬೇಕು. 14 ದಿನಗಳ ಬಳಿಕ ಅಜೆಂಡಾದಲ್ಲಿ ಹಾಕಲು ಚೇರ್ಮನ್‍ಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು.
ಸಭಾಪತಿ ಒಳಗೆ ಬರುವ ಬಾಗಿಲನ್ನೇ ಲಾಕ್ ಮಾಡಿದ್ದಾರೆ. ಬಿಜೆಪಿಯವರು ಎಂತಹ ಗೂಂಡಾಗಳು ಇರಬೇಕು? ಇದು ಅಂಬೇಡ್ಕರ್ ಪ್ರಜಾಪ್ರಭುತ್ವವೇ, ನರೇಂದ್ರ ಮೋದಿಯವರ ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು. ಅಲ್ಲದೆ ಅಶ್ವಥ್ ನಾರಾಯಣ್ ಪೀಠದ ಮೇಲೆ ಹೋಗುತ್ತಾರೆ. ಸಚಿವ ಮಾಧುಸ್ವಾಮಿ ಮಾರ್ಷಲ್‍ಗೆ ಧಮ್ಕಿ ಹಾಕುತ್ತಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಗೌರವ ಕೊಡಬೇಕು. ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ಮಾಹಿತಿ ನೀಡಬೇಕು ಎಂದು ಹರಿಹಾಯ್ದರು.
ಸಭಾಧ್ಯಕ್ಷರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರೂ ಉಪಾಧ್ಯಕ್ಷರನ್ನು ಕೂರಿಸಲು ಬಿಜೆಪಿಯವರು ಮುಂದಾಗುತ್ತಾರೆ. ಹೀಗಾದಾರೆ ಸಂವಿಧಾನಕ್ಕೆ ಏನು ಬೆಲೆ ಕೊಟ್ಟಂತಾಗುತ್ತೆ? ಸಭಾಪತಿ ಪಕ್ಷಪಾತ ಮಾಡಿದ್ದಾರೆ ಎಂದು ನೋಟಿಸ್ ನೀಡುವಾಗ ಸಾಕ್ಷಿ ನೀಡಬೇಕು. ಸಾಕ್ಷಿ ನೀಡಿಲ್ಲದ ಕಾರಣ ಆ ನೋಟಿಸ್ ರಿಜೆಕ್ಟ್ ಆಗಿದೆ. ಸರ್ಕಾರ ಹೇಳಿದೆ ಎಂದು ಸೌಜನ್ಯಕ್ಕಾಗಿ ಸದನ ಕರೆದಿದ್ದಾರೆ. ಸಭಾಪತಿ ಸದನದಲ್ಲಿ ಇದ್ದರು. ಬೆಲ್ ಹಾಕಿದ ಮೇಲೆ ಮಾರ್ಷಲ್ ಸಭಾಪತಿಗೆ ಹೇಳಬೇಕು. ಬೆಲ್ ಬಂದ್ ಆದಮೇಲೆ ಸಭಾಪತಿ ಸದನಕ್ಕೆ ಬರೋದು ನಿಯಮ. ಇದನ್ನೆಲ್ಲಾ ನಡೆಯೋಕೆ ಬಿಜೆಪಿಯವರು ಬಿಟ್ಟರಾ ಎಂದು ಪ್ರಶ್ನಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದವರು ಸಭಾಪತಿಗೆ ಸಲಹೆ ನೀಡಬೇಕು. ಆದರೆ ಇವರೇ ಗಲಾಟೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ, ಕ್ರಿಮಿನಲ್ ಆಕ್ಟ್, ಅಸಂವಿಧಾನಿಕ ನಡೆ. ಕರ್ನಾಟಕದಲ್ಲಿ ಈ ರೀತಿ ಗೂಂಡಾಗಿರಿ ಯಾವತ್ತೂ ಆಗಿರಲಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ಸಭಾಪತಿ ಒಳ ಬರದಂತೆ ಬಾಗಿಲು ಹಾಕಿದ್ದು ಕ್ರಿಮಿನಲ್ ಅಫೆನ್ಸ್ ಎಂದು ಸಿದ್ದರಾಮಯ್ಯ ಕಿಡಿಕಾರಿದರು.