– ಪರೀಕ್ಷಾ ಪ್ರವೇಶ ಪತ್ರದಲ್ಲಿ ಹೆಸರು ಉಲ್ಲೇಖ
ಪಾಟ್ನಾ: ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷಾ ಪ್ರವೇಶ ಪತ್ರದಲ್ಲಿ ಪೋಷಕರ ಹೆಸರನ್ನು ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಭೀಮ್ ರಾವ್ ಅಂಬೇಡ್ಕರ್ ಬಿಹಾರ್ ವಿಶ್ವವಿದ್ಯಾಲಯದ ಧನರಾಜ್ ಮಹತೋ ಪದವಿ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿ ಕುಂದನ್ ಕುಮಾರ್ ತನ್ನ ಪರೀಕ್ಷಾ ಪ್ರವೇಶ ಪತ್ರದಲ್ಲಿ ಈ ರೀತಿ ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಅಲ್ಲದೆ ಈ ಸುದ್ದಿಗೆ ಸ್ವತಃ ಇಮ್ರಾನ್ ಹಶ್ಮಿ ಪ್ರತಿಕ್ರಿಯಿಸಿದ್ದು, ಪ್ರತಿಜ್ಞೆ ಮಾಡುತ್ತೇನೆ, ಅವನು ನನ್ನವನಲ್ಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಇಮ್ರಾನ್ ಹಾಗೂ ಸನ್ನಿ ಲಿಯೋನ್ ತನ್ನ ಪೋಷಕರೆಂದು ಬರೆದಿರುವ ಪ್ರವೇಶ ಪತ್ರವನ್ನು ವಿವಿಯ ಅಧಿಕಾರಿಗಳು ಗಮನಿಸಿದ್ದು, 20 ವರ್ಷದ ವಿದ್ಯಾರ್ಥಿಯ ನಕಲಿ ಪ್ರವೇಶ ಪತ್ರದ ಸ್ಕ್ರೀನ್ ಶಾಟ್‍ನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಇದಕ್ಕೆ ಸ್ವತಃ ಇಮ್ರಾನ್ ಹಶ್ಮಿ ಸಹ ಪ್ರತಿಕ್ರಿಯಿಸಿದ್ದಾರೆ.
ತಂದೆಯ ಹೆಸರಿನ ಜಾಗದಲ್ಲಿ ಇಮ್ರಾನ್ ಹಶ್ಮಿ ಹೆಸರು ಬರೆಯಲಾಗಿದ್ದು, ಸ್ಪೆಲ್ಲಿಂಗ್ ತಪ್ಪಾಗಿದೆ. ಆದರೂ ನಟನ ಹೆಸರನ್ನು ಗುರುತಿಸಲಾಗಿದೆ. ಇನ್ನು ಸನ್ನಿ ಲಿಯೋನ್ ಹೆಸರನ್ನು ತಾಯಿಯ ಹೆಸರಿನ ಜಾಗದಲ್ಲಿ ಬರೆಯಲಾಗಿತ್ತು. ಅಲ್ಲದೆ ಊರಿನ ಹೆರಿನಲ್ಲಿ ರೆಡ್ ಲೈಟ್ ಏರಿಯಾ ಆಗಿರುವ ಚತುರ್ಭುಜ್ ಸ್ಥಾನ್ ಎಂದು ಕಿಡಿಗೇಡಿ ವಿದ್ಯಾರ್ಥಿ ಬರೆದಿದ್ದ.
ಈ ಕುರಿತು ತನಿಖೆಗೆ ಆದೇಶಿಸಿದ್ದು, ನಿಸ್ಸಂಶಯವಾಗಿ ಇದು ಕಿಡಿಗೇಡಿತನ ಹಾಗೂ ವಿದ್ಯಾರ್ಥಿಯೇ ಇದಕ್ಕೆ ಹೊಣೆ. ವಿಚಾರಣೆಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರಾಮ್ ಕೃಷ್ಣ ಠಾಕೂರ್ ಹೇಳಿದ್ದಾರೆ.
ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಪ್ರವೇಶ ಪತ್ರದಲ್ಲಿ ಮುದ್ರಿಸಲಾಗಿದ್ದ ಮೊಬೈಲ್ ನಂಬರ್ ಸಹಾಯದಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ವಿವಿ ಮೂಲಗಳು ತಿಳಿಸಿವೆ.