– ಪ್ರಹ್ಲಾದ್ ಜೋಶಿ ಜೊತೆ ಮುರುಗೇಶ್ ನಿರಾಣಿ ಚರ್ಚೆ
ನವದೆಹಲಿ: ಕೋಲಾರ ಜಿಲ್ಲೆ ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಯಲ್ಲಿ ಬಳಕೆಯಾಗದೇ ಇರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ (ಇಂಡಸ್ಟ್ರಿಯಲ್ ಟೌನ್‍ಶಿಪ್) ಪ್ರಾರಂಭಿಸಲು ಅನುಮತಿ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಬುಧವಾರ ನವದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಿರಾಣಿಯವರು, ಕೆಜಿಎಪ್ ನಲ್ಲಿ ಟೌನ್‍ಶಿಪ್ ನಿರ್ಮಾಣದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಗೆ ಬರುವ ಸುಮಾರು 3,212 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಡ್ರೋಣ್ ಮೂಲಕ ಸಮೀಕ್ಷೆ ನಡೆಸಿದ್ದು, ಇಲ್ಲಿ ಗಣಿಗಾರಿಕೆ ನಡೆಸಲು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
Advertisement
ಈ ಹಿನ್ನೆಲೆಯಲ್ಲಿ ಬಳಕೆಯಾಗದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಸಚಿವರಿಗೆ ವಸ್ತುಸ್ಥಿತಿಯನ್ನು ನಿರಾಣಿ ಅವರು ವಿವರಿಸಿದರು. ಟೌನ್‍ಶಿಪ್ ನಿರ್ಮಾಣವಾದರೆ ಈ ಭಾಗದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನುಕೂಲವಾಗುತ್ತದೆ. ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
Advertisement
ಕೆಜಿಎಫ್ ನಗರವು ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿದ್ದು, ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯುತ್ತಮ ರೈಲ್ವೆ ಸಂಪರ್ಕ ಹೊಂದಿದೆ. ಅಲ್ಲದೆ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಇಲ್ಲಿಯೇ ಹಾದು ಹೋಗುವುದರಿಂದ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಲಿದೆ. ಟೌನ್‍ಶಿಪ್ ನಿರ್ಮಾಣ ಮಾಡಲು ಯೋಗ್ಯವಾಗಿರುವುದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ಕೋರಿದರು.
Advertisement
Advertisement
ಕೆಜಿಎಫ್ ಚಿನ್ನದ ಗಣಿಯು ಅತ್ಯಂತ ಪುರಾತನವಾದ ಗಣಿ ಪ್ರದೇಶವಾಗಿತ್ತು. ಬ್ರಿಟಿಷರ ಕಾಲದಿಂದಲೇ ಇಲ್ಲಿ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಕಳೆದ ಹಲವಾರು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಭಾರತೀಯ ಪರಂಪರೆಯಲ್ಲಿ ಚಿನ್ನಕ್ಕೆ ಅಗ್ರಸ್ಥಾನ. ದೇಶದಲ್ಲಿ ಚಿನ್ನದ ಉತ್ಪಾದನೆ ಪ್ರಮಾಣ ಕಡಿಮೆಯಿರುವುದರಿಂದ ವಿದೇಶಗಳಿಂದ ಪ್ರತಿವರ್ಷ 30 ಬಿಲಿಯ ಡಾಲರ್ (ಅಂದಾಜು 2 ಲಕ್ಷ ಕೋಟಿ ರೂ.ಗೂ ಹೆಚ್ಚು) ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶೀಯವಾಗಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ವಾರ್ಷಿಕ 2ರಿಂದ 3 ಟನ್ ಉತ್ಪಾದಿಸಲಾಗುತ್ತಿದೆ. 19 ವರ್ಷಗಳ ಹಿಂದೆ ಮುಚ್ಚಲಾಗಿದ್ದ ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್)ಗಳಲ್ಲಿ ಮತ್ತೆ ಚಿನ್ನದ ಗಣಿಗಾರಿಕೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ ಎಂದು ತಿಳಿಸಿದರು.
Met Union Minister of Parliamentary Affairs, Coal & Mines Shri @JoshiPralhad Avaru in New Delhi and discussed the development of an Industrial Township at KGF in Kolar district by utilising unused vacant land at Bharat Gold Mines and other issues. pic.twitter.com/ZzUS0r7kbQ
— Dr. Murugesh R Nirani (@NiraniMurugesh) August 11, 2021
12,500 ಎಕರೆಯಲ್ಲಿ ಚಿನ್ನ
ಬಿಜಿಎಂಎಲ್‍ಗೆ ಸೇರಿದ ಗಣಿ ಪ್ರದೇಶ ಸುಮಾರು 12,500 ಎಕರೆಗಳಿದ್ದು, ಈ ಪ್ರದೇಶದಲ್ಲಿ ಚಾಂಪಿಯನ್ ರೀಫ್, ಮಾರಿಕುಪ್ಪಂ, ಗೋಲ್ಕೊಂಡ, ಚಿಗರಿಗುಂಟೆ, ಬಿಸಾನತ್ತಂ, ಮೈಸೂರು ಮೈನ್ಸ್, ನಂದಿದುರ್ಗ್, ಹೆನ್ರೀಸ್ ಸೇರಿದಂತೆ 30ಕ್ಕೂ ಹೆಚ್ಚು ಭಾಗಗಳಲ್ಲಿ ಚಿನ್ನವನ್ನು ಹೊರ ತೆಗೆಯಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವರಾದ ಶ್ರೀ @JoshiPralhad ಅವರನ್ನು ನವದೆಹಲಿಯಲ್ಲಿ ಇಂದು ಭೇಟಿಯಾಗಿ ಕೋಲಾರ ಜಿಲ್ಲೆ ಕೆಜಿಫ್ ನಲ್ಲಿರುವ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಗೆ ಸೇರಿರುವ ಬಳಕೆಯಾಗದ ಜಮೀನಿನಲ್ಲಿ ಕೈಗಾರಿಕಾ ಟೌನ್ ಶಿಪ್ ಪ್ರಾರಂಭಿಸಲು ಅನುಮತಿ ನೀಡುವಂತೆ ಮನವಿ ಪತ್ರ ಸಲ್ಲಿಸಲಾಯಿತು.
— Dr. Murugesh R Nirani (@NiraniMurugesh) August 11, 2021
ಕೆಜಿಎಫ್ ಚಿನ್ನದ ಗಣಿ ಪ್ರಪಂಚದಲ್ಲೇ ಅತ್ಯಂತ ಹಳೆಯದು. ಕೆಜಿಎಫ್ ಭಾಗದಲ್ಲಿ ಚೋಳರ ಕಾಲದಲ್ಲಿ ಚಿನ್ನದ ನಿಕ್ಷೇಪ ಶೋಧಿಸಿದ್ದರ ಬಗ್ಗೆ ಇತಿಹಾಸದ ದಾಖಲೆಗಳಿವೆ. ನಂತರ ಭೂಗರ್ಭ ಶಾಸಜ್ಞರ ಸಹಾಯದಿಂದ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಕಾಲದಲ್ಲಿ ಚಿನ್ನವನ್ನು ಹೊರ ತೆಗೆಯಲಾಗುತ್ತಿತ್ತು ಎಂದು ಈಸ್ಟ್ ಇಂಡಿಯಾ ಕಂಪನಿ ದಾಖಲೆಗಳಲ್ಲಿಉಲ್ಲೇಖವಿದೆ.
ಕೆಜಿಎಫ್ ಚಿನ್ನದ ಗಣಿ ಪ್ರಪಂಚದಲ್ಲೇ ಅತ್ಯಂತ ಆಳವಾದ ಗಣಿ. ಸುಮಾರು 3,200 ಮೀಟರ್ (10,500 ಅಡಿಗಳು) ಆಳದ ಗಣಿಗಳಿವೆ. ಜತೆಗೆ ಚಿನ್ನದ ಅದಿರು ಹೊರತೆಗೆಯಲು ಸುಮಾರು 1,400 ಕಿ.ಮೀ.ಗಳಷ್ಟು ಉದ್ದದ ಸುರಂಗ ಕೊರೆಯಲಾಗಿದೆ. ಕಾರ್ಮಿಕರು ಗಣಿಯ ಆಳಕ್ಕೆ ಇಳಿಯಲು 30ಕ್ಕೂ ಹೆಚ್ಚು ಶಾಪ್ಟ್ ಗಳನ್ನು ನಿರ್ಮಿಸಲಾಗಿತ್ತು. ಕಂಪನಿ ಉತ್ತುಂಗದಲ್ಲಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಈ ಗಣಿಯಲ್ಲಿ ಒಂದು ಟನ್ ನಿಕ್ಷೇಪದಿಂದ ಸುಮಾರು 3.07 ಗ್ರಾಂ.ನಿಂದ 4.09 ಗ್ರಾಂ.ಗಳಷ್ಟು ಚಿನ್ನ ಲಭಿಸುತ್ತಿತ್ತು. ಹಾಗಾಗಿ ಗಣಿಯನ್ನು ಮುಚ್ಚುವವರೆಗೆ ಬಿಜಿಎಂಎಲ್‍ನ ಅಧಿಕೃತ ದಾಖಲೆಗಳ ಮಾಹಿತಿ ಪ್ರಕಾರ ಒಟ್ಟು 800 ಟನ್ ಚಿನ್ನವನ್ನು ಉತ್ಪಾದಿಸಲಾಗಿದೆ. ಇದಕ್ಕೂ ಮೊದಲು, ಚೋಳರ ಕಾಲದಲ್ಲಿ ಮತ್ತು ಹೈದರಾಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಸುಮಾರು 6,200 ಕೆ.ಜಿ.ಗಳಷ್ಟು ಚಿನ್ನವನ್ನು ಉತ್ಪಾದಿಸಲಾಗಿತ್ತು ಎಂಬುದನ್ನು ದಾಖಲೆಗಳ ಸಮೇತ ವಿವರಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಅಮಾನತು ಮಾಡಿ, ಅವರ ವಿರುದ್ಧ ತನಿಖೆ ನಡೆಸಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಸೂಕ್ತ ಭರವಸೆ
ಸಚಿವ ನಿರಾಣಿಯವರ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರು ಸದ್ಯದಲ್ಲಿಯೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ ಸೂಚನೆ ನೀಡಲಾಗುವುದು. ಕೆಜಿಎಫ್ ನಲ್ಲಿ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆ ಮಾಡಲು ಕೇಂದ್ರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು. ಇದನ್ನೂ ಓದಿ: ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ: ಬೇಳೂರು ಗೋಪಾಲಕೃಷ್ಣ