ಮೈಸೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಕರ್ನಾಟಕದಿಂದ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಈ ಬಗ್ಗೆ ಸ್ವತಃ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನನಗಿಂತಲೂ ಹಿರಿಯರು, ಅನುಭವಿಗಳು ರಾಜ್ಯದಲ್ಲಿ ಸಂಸದರಾಗಿದ್ದಾರೆ. ಅವರೆಲ್ಲರಿಗೂ ನಾನು ಶುಭಾಶಯ ತಿಳಿಸುತ್ತೇನೆ. ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಮೈಸೂರು ಕೊಡಗಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಸಂಸದನಾಗಿ ಇದಕ್ಕಿಂತ ದೊಡ್ಡ ಹುದ್ದೆ ಬೇರೆ ಯಾವುದು ಇಲ್ಲ. ಇದಕ್ಕಿಂತ ನಾನು ಬೇರೆನೂ ನಿರೀಕ್ಷೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕೆಲಸ ಮಾಡೋಕೆ ನನಗೆ ಇನ್ನೂ ಸಮಯ ಬೇಕು. ಮೈಸೂರು ಕೊಡಗು ಜನರ ನಿರೀಕ್ಷೆಗಳನ್ನು ಈಡೇರಿಸುವ ಜವಬ್ದಾರಿ ಇದೆ. ಹೀಗಾಗಿ ಈ ಬಗ್ಗೆ ಇನ್ನು ಹೆಚ್ಚಿನದನ್ನು ಹೇಳಲ್ಲ ಎಂದರು.
ಮೈಸೂರಿನ ಮಾದರಿ ಸರ್ಕಾರಿ ಶಾಲೆ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣದ ಬಗ್ಗೆ ಸೃಷ್ಟಿಯಾಗಿರುವ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ವಿವೇಕಾನಂದರು ಯಾವ ಪ್ರಬಲ ಜಾತಿಗೆ ಸೇರಿದವರಲ್ಲ. ಅವರು ಪ್ರಬಲ ಜಾತಿಗೆ ಸೇರಿದವರಾಗಿದ್ದರೆ. ಇಂದು ಈ ವಿವಾದವೇ ಬರುತ್ತಿರಲಿಲ್ಲ. ಇಷ್ಟೊತ್ತಿಗೆ ಸ್ಮಾರಕ ನಿರ್ಮಾಣ ಆಗಿ ವರ್ಷಗಳೇ ಕಳೆಯುತ್ತಿದ್ದವು. ಅವರಿಗೆ ಜಾತಿ ಬೆಂಬಲ ಇಲ್ಲದ ಕಾರಣ ಈ ರೀತಿ ವಿವಾದ ಸೃಷ್ಟಿ ಮಾಡಲಾಗಿದೆ ಎಂದರು.
ಈ ವಿಚಾರ ವಿವಾದವಾಗಿದ್ದು ಮೈಸೂರಿಗೆ ಆಗುತ್ತಿರುವ ಅವಮಾನ. ವಿವೇಕಾನಂದರು ಜಾತಿಯ ಐಕಾನ್ ಅಲ್ಲ, ಅವರು ರಾಷ್ಟ್ರದ ಐಕಾನ್. ಮಹಾರಾಜರೇ ಅವರನ್ನು ಪ್ರೀತಿಯಿಂದ ಗೌರವದಿಂದ ಕಂಡಿದ್ದಾರೆ. ಇದನ್ನು ನಾವು ಮೊದಲು ನೆನಪಿಟ್ಟುಕೊಳ್ಳಬೇಕು. ಸ್ಮಾರಕ ವಿರೋಧ ಮಾಡುತ್ತಿರುವುದು ನಾಚೀಕೆಗೇಡಿನ ಸಂಗತಿ. ಸಂಕುಚಿತ ಮನೋಭಾವದ ಜನ ಸ್ಮಾರಕದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿನ ಫ್ಲೈಓವರ್ ಗೆ ಹೆಸರಿಡುವ ವಿಚಾರದಲ್ಲೂ ಹೀಗೆ ಮಾಡಿದರು. ಕೆಲವು ಸಂಕುಚಿತ ಮನೋಭಾವದ ಜನರು ಅಲ್ಲಿಯೂ ಹೀಗೆ ವಿರೋಧ ಮಾಡಿದರು. ಬಳಿಕ ಸಾರ್ವಕರ್ ಹೆಸರು ನಾಮಕರಣ ಮಾಡಲಾಯಿತು. ಮೈಸೂರಿನಲ್ಲಿ ಸಹ ಕೆಲ ಸಂಕುಚಿತ ಜನರು ಶಾಲೆಯ ನೆಪದಲ್ಲಿ ಹೋರಾಟ ಮಾಡುತ್ತಿದ್ದಾರೆ. ಬೇಕಿದ್ದರೆ ಈ ಶಾಲೆಯನ್ನು ಮುಂಭಾಗದ ಕಟ್ಟಡಕ್ಕೆ ಶಿಫ್ಟ್ ಮಾಡಬಹುದು ಅಥವಾ ಕೂಗಳತೆಯ ದೇವರಾಜ ಶಾಲೆಗೆ ವರ್ಗಾಯಿಸಬಹುದು. ಸಿಎಂ ಈ ಸರ್ಕಾರಿ ಶಾಲೆಯ ಜಾಗ ಹಸ್ತಾಂತರಕ್ಕೆ ಆದೇಶ ಮಾಡಿಕೊಡಲಿ. ನಾನು ಕೇವಲ ಎರಡೇ ಗಂಟೆಯಲ್ಲಿ ಕನ್ನಡ ಮಕ್ಕಳಿಗೆ ಅನ್ಯಾಯವಾಗದಂತೆ ಶಾಲೆಯನ್ನು ಶಿಫ್ಟ್ ಮಾಡಿ, ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತೇನೆ ಎಂದರು.