ಚಿತ್ರದುರ್ಗ: ನೂತನ ಸಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಶ್ರೀರಾಮುಲು ಅವರು ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಧಾವಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ -19ರ 3ನೇ ಅಲೆ ಹಾಗೂ ನೆರೆ ಹಾವಳಿ ಕುರಿತು ಸಭೆ ನಡೆಸಿದ್ದಾರೆ. ಆದರೆ ಈ ಸಭೆಗೆ ಜಿಲ್ಲೆಯ 4 ಮಂದಿ ಬಿಜೆಪಿ ಶಾಸಕರು ಗೈರಾಗುವ ಮೂಲಕ ತಮ್ಮ ಅಸಮಾಧಾನ ಇನ್ನೂ ತಣಿದಿಲ್ಲ ಎಂಬುದನ್ನು ಎತ್ತಿ ಹಿಡಿದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ಜಿಲ್ಲಾಧಿಕಾರಿಗಳ ಸಭೆ ಇಂದು ಬೆಳಗ್ಗೆ ನಿಗದಿಯಾಗಿತ್ತು. ಶಿಷ್ಟಾಚಾರದಂತೆ ಈ ಮಾಹಿತಿ ಜಿಲ್ಲೆಯ 4 ಜನ ಬಿಜೆಪಿ ಶಾಸಕರು ಸೇರಿದಂತೆ ಎಲ್ಲಾ ಶಾಸಕರಿಗೂ ಮಾಹಿತಿ ರವಾನೆಯಾಗಿತ್ತು. ನಿಗದಿಯಂತೆ ಮಧ್ಯಾಹ್ನ 12.30ಕ್ಕೆ ಸಭೆ ಪ್ರಾರಂಭಗೊಂಡು 2 ಗಂಟೆಗೆ ಸಭೆ ಮುಕ್ತಾಯವಾದರೂ ಕೂಡ ಬಿಜೆಪಿ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸೇರಿದಂತೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗದ ಗೂಳಿಹಟ್ಟಿ ಡಿ. ಶೇಖರ್, ಹೊಳಲ್ಕೆರೆಯ ಎಂ.ಚಂದ್ರಪ್ಪ ಸೇರಿದಂತೆ ಯಾವೊಬ್ಬ ಶಾಸಕರು ಕೂಡ ಸಭೆಯಲ್ಲಿ ಭಾಗವಹಿಸದೆ ಪಕ್ಷದ ಮೇಲಿನ ಅಸಮಾಧಾನವನ್ನು ಮತ್ತೊಮ್ಮೆ ತೋರಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಈ ಬಾರಿ ಸಚಿವ ಸ್ಥಾನ ಸಿಕ್ಕಿಯೇ ಸಿಗಲಿದೆ ಎಂಬ ಮಹಾದಾಸೆಯಿಂದ ದೆಹಲಿಯಿಂದ ಕ್ಷೇತ್ರಕ್ಕೆ ಬಂದಿದ್ದರಾದರೂ, ಕೊನೆ ಕ್ಷಣದಲ್ಲಿ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಕ್ಕಲಿಲ್ಲ. ಮತ್ತೊಂದೆಡೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಮಹಿಳಾ ಕೋಟಾದಡಿ ಸಚಿವ ಸ್ಥಾನ ಸಿಗಲಿದೆ ಎಂಬ ಆಸೆಗೆ ಕೊನೆ ಕ್ಷಣದಲ್ಲಿ ನೀರೆರೆದು ಹಗರಣದಲ್ಲಿ ಸಿಲುಕಿದ್ದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಮಂತ್ರಿ ಪಟ್ಟ ಕೊಟ್ಟಿದ್ದನ್ನು ಪೂರ್ಣಿಮಾ ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್
ಹಾಗೆಯೇ ಯಡಿಯೂರಪ್ಪ ಅವರಿಗೆ ನಿಷ್ಠೆಯಿಂದ ಇದ್ದಂತಹ ಬಿಎಸ್ ವೈ ಆಪ್ತ ಎಂ.ಚಂದ್ರಪ್ಪ ಹಾಗೂ ಗೂಳಿಹಟ್ಟಿ ಡಿ.ಶೇಖರ್ ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದು ಅವರಿಗೂ ಸಚಿವ ಸ್ಥಾನ ಸಿಗದ ಕಾರಣ ಬಹಿರಂಗವಾಗಿಯೇ ಪಕ್ಷ ಹಾಗೂ ನಾಯಕರ ವಿರುದ್ಧ ತಮ್ಮ ಅಸಮಧಾನ ಹೊರಹಾಕಿದ್ದರು. ಆದರೆ ಸಂಪುಟ ರಚನೆ ಬಳಿಕ ಎಲ್ಲಾ ಶಾಸಕರ ಅಸಮಧಾನವನ್ನು ತಣಿಸುವುದಾಗಿ ಹೇಳಿದ್ದ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆ ನೋಡಿ ರಾಜ್ಯದ ಜನರಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿದಿದ್ದರು. ಆದರೆ ಇಂದಿನ ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಯಾವೊಬ್ಬ ಶಾಸಕರು ಹಾಜರಾಗದೆ ಇರುವುದನ್ನು ಕಂಡಾಗ ಬಿಜೆಪಿ ಶಾಸಕರ ಅಸಮಧಾನ ಇನ್ನೂ ಕೂಡ ಶಮನವಾಗಿಲ್ಲಾ ಎಂಬ ಮಾತುಗಳು ಕೇಳಿಬಂದಿವೆ.