ಮಡಿಕೇರಿ: ನಮಗೂ ಸಚಿವಸ್ಥಾನ ಬೇಕೆಂದು ಕೇಂದ್ರ ನಾಯಕರನ್ನು ಭೇಟಿಯಾಗಿದ್ದು ನಿಜ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಒಪ್ಪಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಇದೇ ವೇಳೆ ಸಚಿವಸ್ಥಾನಕ್ಕಾಗಿ ಕೇಂದ್ರ ನಾಯಕರನ್ನು ಭೇಟಿಯಾಗಿದ್ದೇನೆ. ಸ್ವಾಮಿಕಾರ್ಯ, ಸ್ವಕಾರ್ಯ ಎರಡನ್ನೂ ಮಾಡಿಕೊಂಡು ಬಂದಿದ್ದೇನೆ ಎಂದರು.
ಮೂಲ ಬಿಜೆಪಿಗರು ಐದಾರು ಬಾರಿ ಗೆದ್ದವರಿದ್ದೇವೆ. ನಾವು ಯಾವಾಗಲೂ ಸಚಿವಸ್ಥಾನಕ್ಕಾಗಿ ಹಾದಿ ರಂಪ ಬೀದಿರಂಪ ಮಾಡದೇ, ಪಕ್ಷಕ್ಕಾಗಿ ನಿಷ್ಠೆಯಿಂದ ಇದ್ದೇವೆ. ಆದರೆ ಹಾದಿರಂಪ ಬೀದಿರಂಪ ಮಾಡಿ ಮತ್ತೆ ಮತ್ತೆ ಸಚಿವರಾದವರೇ ಈ ಬಾರಿಯೂ ಸಚಿವರಾಗಿದ್ದಾರೆ. ಅಂತಹವರನ್ನು ಕೈಬಿಟ್ಟು ನಮಗೆ ಸಚಿವಸ್ಥಾನ ಕೊಡಲಿ ಎಂಬುದು ನಮ್ಮ ಒತ್ತಾಯ ಎಂದಿದ್ದಾರೆ.
ಯಾರನ್ನು ಭೇಟಿಯಾಗಿದ್ದೇನೆ ಎಂಬುದನ್ನೆಲ್ಲ ಹೇಳಲು ಆಗುವುದಿಲ್ಲ. ಲಿಖಿತವಾಗಿ ಮನವಿ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನೆಲ್ಲಾ ಹೇಳೋಕಾಗುತ್ತಾ ಎಂದು ಹೇಳುವ ಮೂಲಕ ಲಿಖಿತವಾಗಿ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತಾಗಿದೆ.