ಮಂಗಳೂರು: ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಸಿಗಬೇಕು ಅಂತ ಬಹು ಜನರ ಬೇಡಿಕೆ ಇದೆ. ಅಧಿಕಾರ ಸಿಗೋದು ಬಿಡೋದು ದೇವರಿಗೆ ಬಿಟ್ಟಿದ್ದು. ನಾನು ಕೂಡ ಅದನ್ನೇ ದೇವರಲ್ಲಿ ಬೇಡುತ್ತೇನೆ. ಅಧಿಕಾರ ಬಂದಾಗ ಅನುಭವಿಸಬೇಕು. ಆದರೆ ಅಧಿಕಾರಕ್ಕಾಗಿ ಇಲ್ಲಸಲ್ಲದ ಲಾಬಿ ಮಾಡೋದು, ಕಿರಿಕಿರಿ ಮಾಡೋದು ಮಾಡಲ್ಲ. ಈ ಹಿಂದೆ ಕೂಡ ಮಾಡಿಲ್ಲ, ಮುಂದೆ ಕೂಡ ಮಾಡಲ್ಲ ಎಂದು ಅವರು ನುಡಿದರು.
Advertisement
Advertisement
ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮೂವರು ಶಾಸಕರಿಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ನಾಳೆ ನೀವು ಬೆಂಗಳೂರಿನಲ್ಲೇ ಇರಿ, ಎಲ್ಲೂ ಹೋಗಬೇಡಿ. ಅಲ್ಲದೆ ಬೆಂಗಳೂರಿನಲ್ಲಿ ಇಲ್ಲದ ಶಾಸಕರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಹುಕ್ಕೇರಿಯ ಉಮೇಶ್ ಕತ್ತಿ, ಸುಳ್ಯದ ಅಂಗಾರ, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಅವರಿಗೆ ಯಡಿಯೂರಪ್ಪ ಕರೆ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಇನ್ನಿಬ್ಬರ ಹೆಸರಿನ ಬಗ್ಗೆ ಇನ್ನೂ ಬಹಿರಂಗವಾಗಿಲ್ಲ ಕೊನೇ ಕ್ಷಣದ ವರೆಗೆ ಸಸ್ಪೆನ್ಸ್ ಕಾಪಾಡಿಕೊಳ್ಳಲಾಗಿದ್ದು, ಯೋಗೇಶ್ವರ್, ಲಿಂಬಾವಳಿ ಹೆಸರು ಸೇರ್ಪಡೆಗೆ ಕಡೇ ಹಂತದ ಕಸರತ್ತು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಯಾವುದೇ ರೀತಿಯ ಸ್ಪಷ್ಟನೆ ಲಭ್ಯವಾಗಿಲ್ಲ. ಇಂದು ಬೆಳಗ್ಗೆಯಷ್ಟೇ ಪ್ರತಿಕ್ರಿಯಿಸಿದ್ದ ಸಿಎಂ, ಬುಧವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸುವ ಸಾಧ್ಯತೆಗಳಿವೆ ಎಂದಿದ್ದರು.