-ಸೋಮಶೇಖರ್ ಅವರದ್ದು ಮಾತು ಕಡಿಮೆ, ಕೆಲಸ ಜಾಸ್ತಿ
-ಇನ್ನೂ ಹೆಚ್ಚಿನ ಟ್ರಯಾಜ್ ಸೆಂಟರ್ ಶೀಘ್ರ ಪ್ರಾರಂಭ
ಬೆಂಗಳೂರು: ಕೋವಿಡ್ 19ರ ಸಂದರ್ಭದಲ್ಲಿ ಜನತೆ ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರಿಗೆ ಚಿಕಿತ್ಸೆಯ ಜೊತೆಗೆ ಧೈರ್ಯ ಸಹ ಬೇಕಿದೆ. ಈ ಕೆಲಸವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾಡುತ್ತಿದ್ದು, ತಮ್ಮ ಕ್ಷೇತ್ರದಲ್ಲಿ ಮೃತಪಟ್ಟವರಿಗೆ 1 ಲಕ್ಷ ರೂಪಾಯಿಯನ್ನು ವೈಯಕ್ತಿಕವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅಲ್ಲದೆ, ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ ಎಂದು ಮೈಸೂರಿನ ಸುತ್ತೂರು ಶ್ರೀ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅಭಿಪ್ರಯಾಪಟ್ಟಿದ್ದಾರೆ.
Advertisement
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ 198ರಲ್ಲಿ ಎಸ್.ಟಿ. ಸೋಮಶೇಖರ್ ಅವರು ಕೋವಿಡ್ 19ರಿಂದ ಮೃತಪಟ್ಟ 24 ಕುಟುಂಬದವರಿಗೆ ವೈಯಕ್ತಿಕವಾಗಿ ನೀಡಲಿರುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಐವರು ಕೋವಿಡ್ ಸೋಂಕಿತರಿಗೆ ಆರ್ಥಿಕ ಧನಸಹಾಯ ಕಾರ್ಯಕ್ರಮಕ್ಕೆ ಮೈಸೂರಿನ ಸುತ್ತೂರು ಶ್ರೀ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ರವರು ಚಾಲನೆ ನೀಡಿ ಮಾತನಾಡಿದರು.
Advertisement
ಎಸ್.ಟಿ.ಎಸ್ ರಿಂದ ಮಾದರಿ ಕಾರ್ಯನಿರ್ವಹಣೆ: ಜಗದ್ಗುರುಗಳು
ಸೋಮಶೇಖರ್ ಅವರು ಸಚಿವರಾಗಿ ರಾಜ್ಯದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅಲ್ಲದೆ, ಇಡೀ ಮೈಸೂರು ಜಿಲ್ಲೆಯನ್ನು ಅವರು ಸಂಚರಿಸಿ, ಪಿ.ಎಚ್.ಸಿಗಳಿಗೂ ಭೇಟಿ ನೀಡಿ ಆಯಾ ಕ್ಷೇತ್ರದ ಶಾಸಕರು ಮಾಡುವಂತಹ ಕೆಲಸವನ್ನು ಮಾಡುವ ಮೂಲಕ ಮಾದರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬಂಡೀಪುರ, ನಾಗರಹೊಳೆ ಕಾಡು ಪ್ರದೇಶಗಳಲ್ಲಿರುವ ಸೋಲಿಗರು ಸೇರಿದಂತೆ ಇತರ ಕುಟುಂಬದವರಿಗೆ ಹೇಗೆ ಸುರಕ್ಷಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಮಾರ್ಗದರ್ಶನವನ್ನು ಕೊಟ್ಟು ಬಂದಿದ್ದಾರೆ. ಈ ಮೂಲಕ ಅಧಿಕಾರಿಗಳಿಗೂ ಮಾಹಿತಿ-ಸೂಚನೆಯನ್ನು ಕೊಟ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಜಗದ್ಗುರು ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮೀಜಿಯವರು ಶ್ಲಾಘನೆ ವ್ಯಕ್ತಪಡಿಸಿದರು.
Advertisement
Advertisement
ಸೋಮಶೇಖರ್ ಅವರದ್ದು ಮಾತು ಕಡಿಮೆ, ಕೆಲಸ ಜಾಸ್ತಿ: ಮಹಾಸ್ವಾಮೀಜಿ
ಸಚಿವರಾದ ಸೋಮಶೇಖರ್ ಅವರು ಹೆಚ್ಚು ಮಾತನಾಡುವವರಲ್ಲ. ಅವರು ಬಹಳ ವರ್ಷದಿಂದ ತಮಗೆ ಪರಿಚಯವಿದೆ. ಮೈಸೂರಿನಲ್ಲಿಯೂ ಸಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಮಾತನಾಡಿದರೂ ಸಹ ಸುಮ್ಮನೆ ಕೇಳಿಸಿಕೊಂಡು, ಮಾತನಾಡದೆ ಕುಳಿತವರಿದ್ದಾರೆಂದರೆ ಅವರು ಸಚಿವರಾದ ಸೋಮಶೇಖರ್ ಅವರು ಮಾತ್ರ. ಅವರದ್ದು ಮಾತು ಕಡಿಮೆ, ಕೆಲಸ ಜಾಸ್ತಿ ಎಂಬ ಪ್ರವೃತ್ತಿ. ಹೀಗಾಗಿ ಕಡಿಮೆ ಮಾತನಾಡಿ, ಹೆಚ್ಚು ಕೆಲಸವನ್ನು ಮೌನದಿಂದಲೇ ಮಾಡುತ್ತಿದ್ದಾರೆ ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು
ಎಲ್ಲರೂ ಸುರಕ್ಷಿತವಾಗಿರಿ
ಮಹಾಮಾರಿ ಕೋವಿಡ್ 19 ಸಾಂಕ್ರಾಮಿಕ ರೋಗವು ಜಗತ್ತನ್ನು ಕಾಡುತ್ತಿದೆ. ಕಳೆದ ವರ್ಷ ಬಂದ ಕೊರೊನಾದಿಂದ ಜನತೆಗೆ ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಆಗ ಜನರು ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮುಖಾಂತರ ತಹಬದಿಗೆ ಬರುವಲ್ಲಿ ಕಾರಣರಾದರು. ಅಲ್ಲದೆ, ಅಮೆರಿಕದಂತಹ ದೇಶಗಳಲ್ಲಿಯೂ ಈ ಸಮಸ್ಯೆ ಬಹಳವಾಗಿ ಕಾಡಿದೆ. ಅಲ್ಲಿಯೂ ಬಹಳ ಕಷ್ಟುಪಟ್ಟು ನಿಯಂತ್ರಣಕ್ಕೆ ತರುತ್ತಿದ್ದಾರೆ. ಆದರೆ, ಈಗ ಕೊರೊನಾದಿಂದ ಏನೂ ಆಗಲ್ಲ ಎಂಬ ಭಾವನೆ ಜನರಲ್ಲಿ ಬಂದು ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇಂದು ಸೋಂಕಿತರ ಸಂಖ್ಯೆ ಉಲ್ಬಣಿಸಿದೆ. ಇದಾಗಬಾರದು, ಎಲ್ಲರೂ ಸುರಕ್ಷಿತವಾಗಿರಿ ಎಂದು ಮಹಾಸ್ವಾಮೀಜಿಗಳು ಕಿವಿ ಮಾತು ಹೇಳಿದರು.
ಸೋಂಕಿಗೆ ಬಡವ, ಶ್ರೀಮಂತ ಎಂಬುದಿಲ್ಲ. ಯಾರೂ ಸಹ ಈ ಬಗ್ಗೆ ನಿರ್ಲಕ್ಷ್ಯ ತೋರುವುದು ಬೇಡ. ಇನ್ನು ಹಳ್ಳಿಗಳಲ್ಲಿಯೂ ಕೆಲವೊಂದು ತಪ್ಪು ಕಲ್ಪನೆಗಳಿದ್ದು, ಯಾವುದೇ ಕಾಯಿಲೆಗಳು ಬಂದರೆ ಮನೆಯಲ್ಲಿಯೇ ಔಷಧಿಯನ್ನು ತೆಗೆದುಕೊಳ್ಳದೆ, ವೈದ್ಯರಿಗೆ ತೋರಿಸಿ ಗುಣಪಡಿಸಿಕೊಳ್ಳಬೇಕು. ಕೊರೊನಾ ಬಂದರೆ ಗುಟ್ಟಾಗಿ ಇಟ್ಟುಕೊಳ್ಳದೆ, ಸೂಕ್ತ ಚಿಕಿತ್ಸೆ ಪಡೆದು ಶೀಘ್ರ ಗುಣಮುಖರಾಗಬೇಕು ಎಂದು ಜಗದ್ಗುರು ಶಿವರಾತ್ರಿದೇಶೀಕೇಂದ್ರ ಮಹಾ ಸ್ವಾಮೀಜಿಗಳು ತಿಳಿಸಿದರು.
ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದೇವೆ
ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ, ನಾವೀಗ ಕ್ಷೇತ್ರದಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಲಕ್ಷಣಗಳು ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಮನವೊಲಿಸಲು ನಾನೂ ಸಹ ಖುದ್ದು ಮುಂದಾಗಿದ್ದೇನೆ. ಜನರ ಆರೋಗ್ಯ ನಮಗೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿದ್ದೇವೆ. ಕೆಲವರು ರೋಗವನ್ನು ಹೇಳಿಕೊಳ್ಳಲು ಮುಜುಗರ ಮಾಡಿಕೊಳ್ಳುತ್ತಿದ್ದಾರೆ. ಇದಾಗಬಾರದು, ಲಕ್ಷಣ ಕಂಡುಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ. ಚೆನ್ನೇನಹಳ್ಳಿಯಲ್ಲಿ ಜನಸೇವಾ ಕೋವಿಡ್ ಕೇರ್ ಸೆಂಟರ್ ಅನ್ನು ತೆರೆದಿದ್ದು, 105 ಬೆಡ್ ಗೂ ಹೆಚ್ಚು ಸೌಲಭ್ಯವನ್ನು ನೀಡಿದ್ದೇವೆ. ಇಲ್ಲಿ ಅನೇಕರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ 70-80 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ 370 ಬೆಡ್ ಗಳಿದ್ದು, 40 ಆಕ್ಸಿಜನ್ ಬೆಡ್ ಗಳಿವೆ. ಸೋಂಕಿತರು ಯಾರಿಗೂ ಕರೆ ಮಾಡಿ ಹೇಳಿಸಬೇಕಾದ ಅವಶ್ಯಕತೆ ಇಲ್ಲ. ಅಲ್ಲಿಗೆ ನೇರವಾಗಿ ಹೋಗಿ ದಾಖಲಾಗಬಹುದಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಇನ್ನೂ ಹೆಚ್ಚಿನ ಟ್ರಯಾಜ್ ಸೆಂಟರ್ ಶೀಘ್ರ ಪ್ರಾರಂಭ
ಕೆಂಗೇರಿ, ಹೇರೋಹಳ್ಳಿಗಳಲ್ಲಿ ಕೋವಿಡ್ ಟ್ರಯಾಜ್ ಸೆಂಟರ್ ಅನ್ನು ತೆರೆದಿದ್ದು, ಶೀಘ್ರದಲ್ಲಿ ಹೆಮ್ಮಿಗೆಪುರ ಸೇರಿ ಇನ್ನೂ ಹಲವು ಕಡೆ ತೆರೆಯಲಿದ್ದೇವೆ. ಇಲ್ಲಿ ವೈದ್ಯರು ಇದ್ದು, ಭೇಟಿ ನೀಡಿದವರಿಗೆ ಯಾವ ರೀತಿಯ ಚಿಕಿತ್ಸೆಯ ಅವಶ್ಯಕತೆ ಇದೆ. ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಸಾಕೇ? ಆಸ್ಪತ್ರೆಗೆ ದಾಖಲಾಗಬೇಕೇ? ಆಕ್ಸಿಜನ್ ಬೆಡ್ ಅವಶ್ಯಕತೆ ಇದೆಯೆ? ಎಂಬೆಲ್ಲ ಮಾಹಿತಿಯನ್ನು ನೀಡಿ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಹೀಗಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸರ್ಕಾರದಿಂದ ಸಹ ಸೂಕ್ತ ಸೌಲಭ್ಯ ನೀಡಲಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಒಂದು ಪೈಸೆ ಖರ್ಚಿಲ್ಲದೆ ಚಿಕಿತ್ಸೆ ಪಡೆಯುವಂತಹ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಜನತೆ ಉಪಯೋಗಿಸಿಕೊಳ್ಳಬೇಕು ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.
ತಬ್ಬಲಿ ಮಕ್ಕಳಿಗೆ ಸುತ್ತೂರು ಮಠದಿಂದ ಉಚಿತ ಶಿಕ್ಷಣ ಕೊಡುವ ಕ್ರಮ ಅನುಕರಣೀಯ
ರಾಜ್ಯದ ಎಲ್ಲಿಯೇ ಕೋವಿಡ್ ನಿಂದ ಮೃತಪಟ್ಟು ತಬ್ಬಲಿಯಾಗುವ ಮಕ್ಕಳಿಗೆ 1ನೇ ತರಗತಿಯಿಂದ 10ನೇ ತರಗತಿ ವರೆಗೆ ಉಚಿತ ಶಿಕ್ಷಣವನ್ನು ಸುತ್ತೂರು ಶ್ರೀಮಠದಿಂದ ಕೊಡುವುದಾಗಿ ಈಗಾಗಲೇ ಮಹಾಸ್ವಾಮೀಜಿಗಳು ಘೋಷಿಸಿದ್ದಾರೆ. ಇಂತಹ ಮಾನವೀಯ ಗುಣಗಳು ಜನತೆಯನ್ನು ಕಾಪಾಡುತ್ತಿದೆ. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳ ಬಾಳು ಬೆಳಕಾಗಲಿದೆ ಎಂದರು.
ಮೈಸೂರಿನಲ್ಲಿ ಸರ್ಕಾರಕ್ಕೆ ಶಕ್ತಿ ತುಂಬಿದ ಸುತ್ತೂರು ಮಠ
ಮೈಸೂರಿನಲ್ಲಿಯೂ ಸಹ ಸುತ್ತೂರು ಶ್ರೀ ಮಠದ ಆಸ್ಪತ್ರೆಯಲ್ಲಿ ಸುತ್ತಮುತ್ತಲ ಜಿಲ್ಲೆಗಳಿಂದ ಬಂದರೂ ಸಹ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್, ವೆಂಟಿಲೇಟರ್, ಐಸಿಯು ಬೆಡ್ ಗಳು ಸೇರಿದಂತೆ ಯಾವುದಕ್ಕೂ ಕೊರತೆ ಇಲ್ಲ. 500 ಬೆಡ್ ಗಳನ್ನು ಮೈಸೂರು ಜೆಎಸ್ ಎಸ್ ಆಸ್ಪತ್ರೆ ವತಿಯಿಂದ ಕೊಡಲಾಗಿದೆ. ಅಲ್ಲದೆ, ಮೈಸೂರಿನಲ್ಲಿರುವ ಜೆಎಸ್‍ಎಸ್ ಶಾಲೆಗಳು ಹಾಗೂ ಕಲ್ಯಾಣ ಮಂಟಪಗಳನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಿ ಚಿಕಿತ್ಸೆಗೆ ಉಚಿತವಾಗಿ ಬಳಸಿಕೊಳ್ಳಲು ಜಗದ್ಗುರುಗಳು ಸೂಚಿಸಿದ್ದಾರೆ. ಅಲ್ಲದೆ, ಸ್ವಾಮೀಜಿಗಳು ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಆಗಾಗ ಅಗತ್ಯ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ಸರ್ಕಾರಕ್ಕೆ ಮಹಾಸ್ವಾಮೀಜಿಗಳು ಶಕ್ತಿಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.
ಎಲ್ಲರೂ ಚಿಕಿತ್ಸೆ ಪಡೆಯಿರಿ
ಮೊದಲನೇ ಅಲೆ ಇಷ್ಟು ತೊಂದರೆ ಕೊಟ್ಟಿರಲಿಲ್ಲ. ಆದರೆ, ಎರಡನೇ ಅಲೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ನನ್ನ ಯಶವಂತಪುರ ಕ್ಷೇತ್ರದಲ್ಲಿ ಏಳೂವರೆ ಸಾವಿರ ಜನರಿಗೆ ಕೋವಿಡ್ ಸೋಂಕು ಬಂದಿದ್ದು, ಈಗಾಗಲೇ ಆರೂವರೆ ಸಾವಿರ ಮಂದಿ ಗುಣಮುಖರಾಗಿದ್ದಾರೆ. ಇನ್ನೂ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಚಿಕಿತ್ಸೆ ಪಡೆದವರು ಗುಣಮುಖರಾಗುತ್ತಿದ್ದಾರೆ. ಆದರೆ, ಜ್ವರ, ನೆಗಡಿಯನ್ನು ನಿರ್ಲಕ್ಷ್ಯ ಮಾಡಿ ಮನೆಯಲ್ಲೇ ಸ್ವ ಔಷಧಿ ಮಾಡಿಕೊಂಡವರಿಗೆ ಸ್ವಲ್ಪ ಸಮಸ್ಯೆಯಾಗಿದ್ದಿದೆ. ಹಾಗಾಗಿ ಎಲ್ಲರೂ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
ಯಾರಿಗೂ ಆತಂಕ ಬೇಡ
ಜನತೆ ಕೋವಿಡ್ ನಿಂದ ಸಾಕಷ್ಟು ಹೆದರಿದ್ದಾರೆ. ಭಯದಿಂದಲೇ ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಸುತ್ತೂರು ಮಹಾಸಂಸ್ಥಾನ ಜಗದ್ಗುರುಗಳನ್ನು ಇಲ್ಲಿಗೆ ಕರೆಸಿಕೊಂಡು ಕಾರ್ಯಕ್ರಮವನ್ನು ನಡೆಸುವ ಮೂಲಕ ಜನತೆಗೆ ಧೈರ್ಯ ತುಂಬವ ಕೆಲಸವನ್ನು ಮಾಡುತ್ತಿದ್ದೇನೆ. ನನ್ನ ಆಪ್ತರನ್ನು ಸಹ ಕೋವಿಡ್ ನಿಂದ ಕಳೆದುಕೊಂಡಿದ್ದೇನೆ. ಈ ಕಾರಣಕ್ಕೆ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇನೆ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಇದಕ್ಕಾಗಿ 1350 ಕೊರೊನಾ ವಾರಿಯರ್ಸ್ ಗಳನ್ನು ನೇಮಿಸಿ, ಅವರಿಗೆ ತರಬೇತಿ ಕೊಟ್ಟು ಸೇವೆಗೆ ಕಳುಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.