ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ, ರಾಜಕೀಯ ಮಾಡೋದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಎಂದು ಮಾಜಿ ಸಚಿವ ಚಾಮರಾಜನಗರ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ವಾಗ್ದಾಳಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಮಾಡೋದಾದರೆ ನಿಮ್ಮ ಪಕ್ಷದ ಕಚೇರಿಯಲ್ಲಿ ಮಾಡಿ, ಸುಮ್ಮನೆ ಯಾಕೆ ಉಸ್ತುವಾರಿ ಸಚಿವರಾಗಿದ್ದೀರಿ. ನೀವು ಹೇಳಿದ್ದು ಇಲ್ಲಿಯವರೆಗೆ ಏನಾದರೂ ನಡೆದಿದೆಯಾ ಎಂದು ಅವರು ಪ್ರಶ್ನಿಸಿದರು. ಅಲ್ಲದೆ ಕೋವಿಡ್ ಗಾಗಿ 3 ಕೋಟಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದೀರಿ. ಗಣಿ ಭೂ ವಿಜ್ಷಾನ ಅನುದಾನವನ್ನು ಬಳಕೆ ಮಾಡಿಕೊಂಡಿದ್ದೀರಿ. ಆದರೆ ಏನೂ ಕೆಲಸ ಆಗಿಲ್ಲ ಎಂದು ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ.
ಇದೇ ವೇಳೆ ಮಾಜಿ ನಗರಸಭಾ ಅಧ್ಯಕ್ಷ ಕಾಂಗ್ರೆಸ್ ಹಿರಿಯ ಮುಖಂಡ ನಂಜುಂಡಸ್ವಾಮಿ ಮಾತನಾಡಿ, ಸಚಿವ ಸುರೇಶ್ ಕುಮಾರ್ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರನ್ನು ಕೂಡಲೇ ಉಸ್ತುವಾರಿಯಿಂದ ಬದಲಾಯಿಸಿ ವಿ.ಸೋಮಣ್ಣ ಅವರನ್ನು ನೇಮಿಸಿ ಎಂದು ಆಗ್ರಹಿಸಿದರು.
ಆ್ಯಕ್ಟೀವ್ ಆಗಿರೋರಿಗೆ ಚಾಮರಾಜನಗರ ಉಸ್ತುವಾರಿ ಕೊಡಿ, ಸುರೇಶ್ ಕುಮಾರ್ ಅವರನ್ನೇ ಮುಂದುವರಿಸಿದರೆ ಅವರು ಜಿಲ್ಲೆಗೆ ಬಂದಾಗ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸೋಮಣ್ಣ ಉಸ್ತುವಾರಿ ಸಚಿವರಾಗಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗ್ತಾ ಇದ್ದವು ಎಂದು ಅವರು ಸಚಿವ ಸೋಮಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ.