ಮಂಗಳೂರು: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಒದಗಿಸಿಕೊಡುವಂತೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘದ ಪ್ರಮುಖರು ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ವೇದವ್ಯಾಸ ಕಾಮತ್, ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘವು ಸಮುದಾಯ ಆಧಾರಿತ ಸಂಸ್ಥೆಯಾಗಿದ್ದು ಸಮಾಜದ ಅಭ್ಯುದಯಕ್ಕೆ ಅನನ್ಯ ಕೊಡುಗೆ ನೀಡಿದೆ. ಪರಿಶಿಷ್ಟ ಜಾತಿಯ ಉಪಜಾತಿಯಾಗಿರುವ ಆದಿದ್ರಾವಿಡ ಸಮಾಜದ ಮಕ್ಕಳ ಶಿಕ್ಷಣ ಮುಂತಾದ ಚಟುವಟಿಕೆಗಳಲ್ಲಿ ಸಂಘವು ಸಕ್ರಿಯವಾಗಿದೆ. ಆ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಜಾಗ ಒದಗಿಸುವಂತೆ ಸಚಿವರಿಗೆ ಮನವಿ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾದ ರಘುನಾಥ್ ಪಿ. ಅತ್ತಾವರ, ಜಿಲ್ಲಾ ಉಪಾಧ್ಯಕ್ಷರಾದ ಸಂಜೀವ ಪಿ. ಕೋಟ್ಯಾನ್, ಮಾಜಿ ಅದ್ಯಕ್ಷರಾದ ಕೃಷ್ಣ ಸೂಟರ್ ಪೇಟೆ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸಿ.ಬಿ, ಸದಸ್ಯರಾದ ನಾಗರಾಜ್ ಪಿ., ಜಯೇಂದ್ರ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.