ತುಮಕೂರು: ಸಚಿವ ಮಾಧುಸ್ವಾಮಿ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.
ಈ ಅವ್ಯವಸ್ಥೆ ಖಂಡಿಸಿ ಕೋವಿಡ್ ಸೋಂಕಿತರು ಕೇಂದ್ರದಿಂದ ಹೊರಗೆ ಬಂದು ಪ್ರತಿಭಟಿಸಿದ್ದಾರೆ. ಇಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇಂದ್ರ ತೆರೆಯಲಾಗಿದ್ದು, ಸುಮಾರು 80 ಸೋಂಕಿತರಿದ್ದಾರೆ. ಸರಿಯಾದ ಊಟ ತಿಂಡಿ ಇವರಿಗೆ ಸಿಗುತ್ತಿಲ್ಲ. ಚಿಕಿತ್ಸೆಯಂತೂ ಇಲ್ಲವೇ ಇಲ್ಲ, ನರ್ಸ್, ಡಾಕ್ಟರ್ ಗಳು ಕೂಗಿ ಕರೆದರೂ ಬರುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ. ಬಹುತೇಕ ವೃದ್ಧರೇ ಇಲ್ಲಿ ಇರೋದ್ರಿಂದ ನಮ್ಮನ್ನು ಸಾಯಿಸಲು ಇಲ್ಲಿಗೆ ತಂದು ಕೂಡಿ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನೊಂದೆಡೆ ಮಧುಗಿರಿ ಪಟ್ಟಣದ ಸಮಾಜ ಕಲ್ಯಾಣ ಇಲಾಯ ಹಾಸ್ಟೆಲ್ ನಲ್ಲಿ ತೆರೆದ ಕೋವಿಡ್ ಕೇರ್ ಸೆಂಟರಲ್ಲೂ ಅವ್ಯವಸ್ಥೆ ಉಂಟಾಗಿದೆ. ಇದರಿಂದ ಬೇಸತ್ತ ಸೋಂಕಿತ ವೃದ್ಧ ರಂಗಪ್ಪ ಕೇರ್ ಸೆಂಟರ್ ನಿಂದ ತಪ್ಪಿಸಿಕೊಂಡು ಬಂದು ಪಟ್ಟಣ ತುಂಬಾ ಓಡಾಡಿದ್ದಾರೆ. ಸೋಂಕಿತ ವೃದ್ಧನ ಓಡಾಟ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.