– ಮೊಬೈಲ್ ಟಾರ್ಚ್ ಹಿಡಿದ ಅಧಿಕಾರಿಗಳು
ಗದಗ: ಕೋವಿಡ್ 3ನೇ ಅಲೆ ಮುನ್ನೆಚ್ಚರಿಕೆ ಕುರಿತು ನಗರದ ಜಿಲ್ಲಾಡಳಿತ ಭವನದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಚಿವೆ, ಶಾಸಕರುಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇರುವ ಈ ಸಭೆಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ನಡೆಸಿತು. ಕೆಲಕಾಲ ಕತ್ತಲಲ್ಲಿ ಸಭೆ ಆರಂಭಿಸುವ ಮೂಲಕ ಜಿಲ್ಲಾಡಳಿತ ಮುಜುಗರಕ್ಕಿಡಾಯಿತು.
ಸಭೆ ಆರಂಭದಲ್ಲಿಯೇ ವಿದ್ಯುತ್ ಕೈಕೊಟ್ಟಿತು. ಅದೇ ರೀತಿ 1 ಗಂಟೆ ನಡೆದ ಸಭೆಯಲ್ಲಿ ಸುಮಾರು 4 ಬಾರಿ ಕರೆಂಟ್ ಹೋಗಿ ಬರುವ ಕೆಲಸ ಮಾಡಿತು. ಆಗ ಸಚಿವೆ ಏನ್ರಿ ಇದು, ಜನರೇಟರ್ ವ್ಯವಸ್ಥೆ ಏನು ಇಲ್ವಾ? ಹೀಗ್ಯಾಕೆ, ಮುಖ್ಯ ವಿಷಯಗಳ ಚರ್ಚೆ ಸಮಯದಲ್ಲಿಯೇ ಕರಂಟ್ ಹೋಗ್ತಿದೆ ಅಂತ ಅಧಿಕಾರಿಗಳ ವಿರುದ್ಧ ಗರಂ ಆದರು. ಆಗ ಡಿಸಿ ಮಾತನಾಡಿ, ಈ ಭಾಗದಲ್ಲಿ ನಿನ್ನೆಯಿಂದ ವಿದ್ಯುತ್ ದುರಸ್ತಿ ಕಾರ್ಯ ನಡೆದಿದೆ. ಜನರೇಟರ್ ಇದೆ ಅಂತ ಸಮಜಾಯಿಸಿಕೊಂಡ್ರು. ಕೆಲವು ಅಧಿಕಾರಿ ವರ್ಗ ಮೊಬೈಲ್ ಟಾರ್ಚ್ ಹಿಡಿದು ಕುಳಿತರು.
ಸಭೆಯಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಎಸ್.ಪಿ ಯತೀಶ್ ಎನ್, ಜಿ.ಪಂ ಮುಖ್ಯಾಧಿಕಾರಿ ಭರತ್, ಡಿ.ಎಚ್.ಓ ಸತೀಶ್ ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.