ದಾವಣಗೆರೆ: ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಕೆ. ಸುಧಾಕರ್ ಅವರನ್ನು ಭೇಟಿ ಮಾಡಲು ಬಂದ ವೃದ್ಧರೊಬ್ಬರು ಕೈ ಮುಗಿದು ಕೇಳ್ಕೋಕೋತಿನಿ ಬೆಡ್ ಕೊಡ್ಸಿ ಸರ್ ಎಂದು ಪೊಲೀಸರ ಎದುರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲು ಬಂದ ಕೆ. ಸುಧಾಕರ್ ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಸ್ಪತ್ರೆಯ ಮುಂಭಾಗದಲ್ಲಿ ರೋಗಿ ಸಂಬಂಧಿಕರು ಕಾದು ಕುಳಿತಿದ್ದರು. ಆದರೆ ಸಚಿವರನ್ನು ಭೇಟಿ ಮಾಡಲು ಮುಂದಾದ ರೋಗಿ ಸಂಬಂಧಿಕರನ್ನು ಪೊಲೀಸರು ಭೇಟಿ ಮಾಡಿಸದೆ ಹೊರ ಹಾಕಿ ಘಟನೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಿತು.
ಅಗಸನಕಟ್ಟೆ ಗ್ರಾಮದ ಷಣ್ಮುಖಯ್ಯ ಎಂಬವರ ಮಗ ಬಸವರಾಜಯ್ಯ ಎಂಬವರಿಗೆ ಕೋವಿಡ್ ಇದ್ದು ಬೆಡ್ ಬೇಕಿದೆ ಎಂದು ಸಚಿವರ ಬಳಿ ಮನವಿ ಮಾಡಲೆಂದು ಷಣ್ಮುಖಯ್ಯ ಸಜ್ಜಾಗಿದ್ದರು. ಆದರೆ ಸಚಿವರು ಬರುತ್ತಿದ್ದಂತೆ ಷಣ್ಮುಖಯ್ಯ ಅವರನ್ನು ಪೊಲೀಸರು ಹೊರ ಹಾಕಲು ಮುಂದಾಗಿದ್ದಾರೆ ಈ ವೇಳೆ ನನ್ನ ಮಗನಿಗೆ ಬೆಡ್ ಸಿಗ್ತಾ ಇಲ್ಲ ಬೆಡ್ ಕೊಡಿಸಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ. ಆದರೆ ವೃದ್ಧನ ಮಾತನ್ನು ಕೇಳದ ಪೊಲೀಸರು ಆತನನ್ನು ಹೊರಹಾಕಿದ್ದಾರೆ.
ಆರೋಗ್ಯ ಸಚಿವ ಕೆ. ಸುಧಾಕರ್ ಆಸ್ಪತ್ರೆಗೆ ಭೇಟಿಕೊಡುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮತ್ತು ಸಂಸದ ಜಿಎಂ ಸಿದ್ದೇಶ್ವರ್, ಸಚಿವರಿಗೆ ಸಾಥ್ ನೀಡಿದರು.