– ಕಾಟಾಚರದ ಬದಲು, ರಿಯಲ್ ನೈಟ್ ಕರ್ಫ್ಯೂ ಬೇಕೆಂದ ಅಶೋಕ್
ಬೆಂಗಳೂರು: ಕರ್ಫ್ಯೂ ವಿಚಾರದಲ್ಲಿ ಸಚಿವರು ಒಂದೊಂದು ರೀತಿಯ ಹೇಲಿಕೆ ನೀಡುತ್ತಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೈಟ್ ಕರ್ಫ್ಯೂ ಮುಗಿದ ಅಧ್ಯಾಯವೆಂದರೆ, ಕಂದಾಯ ಸಚಿವ ಆರ್.ಅಶೋಕ್ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಅಗತ್ಯ ಎಂದು ಹೇಳಿದರು.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಯಾವದೇ ರೀತಿಯ ಕರ್ಫ್ಯೂ ಜಾರಿಗೆ ತಂದರೂ ಸರಿಯಾದ ರೀತಿಯಲ್ಲಿ ತರಬೇಕು. ಕಾಟಾಚಾರಕ್ಕೆ ಕರ್ಫ್ಯೂ ಜಾರಿಗೆ ತರದೆ, ಸೂಕ್ತ ನಿರ್ಬಂಧಗಳನ್ನು ಹೇರುವ ಮೂಲಕ ಜನರ ಓಡಾಟ ತಪ್ಪಿಸಬೇಕು. ರಿಯಲ್ ಕರ್ಫ್ಯೂ ಜಾರಿಗೆ ತರಲು ಮುಖ್ಯಮಂತ್ರಿಗಳೊಂದಿಗೆ ನಾನು ಚರ್ಚಿಸುತ್ತೇನೆ. ಈಗ ಕರ್ಫ್ಯೂ ಜಾರಿಗೆ ತರುವುದು ತುಂಬಾ ಮುಖ್ಯವಾಗಿದೆ. ಬ್ರಿಟನ್ ವೈರಸ್ ತುಂಬಾ ವೇಗವಾಗಿ ಹಬ್ಬುತ್ತದೆ ಎಂದು ಆರ್.ಅಶೋಕ್ ತಿಳಿಸಿದರು.
Advertisement
Advertisement
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಸಂಬಂಧಿಸಿದಂತೆ 15 ದಿನಗಳ ಹಿಂದೆಯೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಾನು ಸೇರಿದಂತೆ ಹಲವರು ಸಭೆ ಸೇರಿ ಮಾರ್ಗಸೂಚಿಯನ್ನು ಹೊಡಿಸಿದ್ದೇವೆ. ಬೆಂಗಳೂರಿನಲ್ಲಿಯೇ ಹೊಸ ವರ್ಷದ ಆಚರಣೆ ಹೆಚ್ಚಾಗಿ ನಡೆಯುವುದರಿಂದ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದಾರೆ. ಕರ್ಫ್ಯೂ ನಿಯಮಗಳನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಪಾಲಿಸುವುದು ಜನ ಸಾಮಾನ್ಯರ ಕರ್ತವ್ಯವಾಗಿದೆ ಎಂದು ಎಚ್ಚರಿಸಿದರು.
Advertisement
ಶಾಲಾಕಾಲೇಜು ತೆರೆಯುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀರ್ಮಾನಿಸುತ್ತಾರೆ. ಕೆಲವು ಪೋಷಕರು ಶಾಲೆ ತೆರೆಯಬೇಕೆಂದು, ಮತ್ತೆ ಕೆಲವರು ಶಾಲೆ ತೆರೆಯುವುದುಬೇಡ ಎಂದು ಹೇಳುತ್ತಿದ್ದಾರೆ. ಮಕ್ಕಳ ಭವಿಷ್ಯದಲ್ಲಿ ಇದು ಕಪ್ಪು ಚುಕ್ಕಿಯಾಗಬಾರದು. ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಲೆಯನ್ನು ಪ್ರಾರಂಭಿಸುವುದು ಮುಖ್ಯವಾಗಿದೆ. ಸರ್ಕಾರ ಶೀಘ್ರದಲ್ಲೇ ಗೊಂದಲ ನಿವಾರಣೆ ಮಾಡುತ್ತದೆ ಎಂದು ತಿಳಿಸಿದರು.
Advertisement
ಧರ್ಮೇಗೌಡರ ಸಾವಿನ ಕುರಿತು ತನಿಖೆ ಅಗತ್ಯ
ಧರ್ಮೇಗೌಡರ ಸಾವಿನ ಕುರಿತು ಬೇಸರ ವ್ಯಕ್ತಪಡಿಸಿದ ಆರ್.ಅಶೋಕ್, ವಿಧಾನ ಸೌಧದ ಮಾಜಿ ಉಪಸಭಾ ಪತಿ ಧರ್ಮೇಗೌಡರ ಸಾವು ನಿಜಕ್ಕೂ ದುಃಖ ತಂದಿದೆ. ಅವರ ಸಾವು ರಾಜಕಾರಣಿಗಳಿಗೆ ಒಂದು ಪಾಠ ಆಗಬೇಕು. ಧರ್ಮೇಗೌಡ ಒಬ್ಬ ಸಜ್ಜನ ರಾಜಕಾರಣಿ, ಅವರ ಸಾವು ನಿಜಕ್ಕೂ ಎಲ್ಲರಿಗೂ ದುಃಖ ತಂದಿದೆ. ವಿಧಾನ ಪರಿಷತ್ತಿನಲ್ಲಿ ನಡೆದ ಗಲಾಟೆಯಿಂದ ಬಹಳ ಮನನೊಂದಿದ್ದರು ಎಂದು ಡೆತ್ ನೋಟ್‍ನಲ್ಲಿ 2 ಬಾರಿ ಉಲ್ಲೇಖನ ಮಾಡಿದ್ದಾರೆ ಎಂಬ ಮಾಹಿತಿ ನನಗೆ ದೊರೆತಿದ್ದು, ಈ ವಿಚಾರವಾಗಿ ತನಿಖೆಯ ನಂತರ ಸತ್ಯ ಬಹಿರಂಗಗೊಳ್ಳಲಿದೆ ಎಂದರು.
ವಿಧಾನ ಪರಿಷತ್ತಿನಲ್ಲಿ ಯಾವುದೇ ಗಲಾಟೆ ನಡೆಯುತ್ತಿದ್ದಾಗ ಕುರ್ಚಿಯಿಂದ ಅವರನ್ನು ಎಳೆದು ಮತ್ತೊಬ್ಬರು ಕುಳಿತುಕೊಳ್ಳುವುದು ಒಳ್ಳೆಯ ಪರಿಪಾಠವಲ್ಲ. ಕುರ್ಚಿ ಬೇಕಿದ್ದಲ್ಲಿ ಮಾತಿನ ಮೂಲಕ ಕೇಳಬಹುದಾಗಿತ್ತು. ಈ ಹಿಂದೆ ಶಂಕರ್ ಮೂರ್ತಿಯವರು ಎಂಎಲ್‍ಸಿಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತುಕೊಂಡು ಉಪಸಭಾಪತಿಗಳಿಗೆ ಸಭೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಶಂಕರ್ ಮೂರ್ತಿಯವರು ಪಾಲಿಸಿದ ನಿಯಮವನ್ನೇ ಧರ್ಮೇಗೌಡರು ಪಾಲನೆ ಮಾಡಿದ್ದರು. ಧರ್ಮೇಗೌಡರ ಸಾವಿನ ವಿಚಾರವಾಗಿ ತನಿಖೆಯಾಗಬೇಕು ಮುಂದೆ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ತಿನ ಬಾಗಿಲಿಗೆ ಒದೆಯುವುದು, ಎಳೆದಾಡುವ ಪದ್ಧತಿಗಳನ್ನು ರಾಜಕಾರಣಿಗಳು ಮಾಡಬಾರದು. ಸುಸಜ್ಜಿತ ಪ್ರಜಾಪ್ರಭುತ್ವದ ವ್ಯವಸ್ಥೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲಿಯೂ ಬರಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹೊಡಿಬಡಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಒಳ್ಳೆಯ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡಿ, ಧರ್ಮೇಗೌಡರ ಸಾವು ರಾಜಕಾರಣಿಗಳಿಗೆ ಒಂದು ಪಾಠ ಆಗಬೇಕು. ಎಲ್ಲರಿಗೂ ಮಾರ್ಗದರ್ಶನವಾಗಬೇಕು. ಆಗ ಅವರ ಆತ್ಮಕ್ಕೆ ಶಾಂತಿಸಿಗುತ್ತದೆ ಎಂದರು.
ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜ್ಯಾದ್ಯಂತ ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಮೇಲು ಗೈ ಸಾಧಿಸಿದೆ. ಇದರಿಂದ ಕಾಂಗ್ರೆಸ್ ಹಿನ್ನಡೆಗೊಳ್ಳುವ ಸಂದರ್ಭ ಸೃಷ್ಟಿಸಿದ್ದೇವೆ. ಕರ್ನಾಟಕದ ಇಡೀ ಜನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿದ್ದಾರೆ. ಜನ ಕೊಟ್ಟಿರುವ ಬೆಂಬಲಕ್ಕೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಯಡಿಯೂರಪ್ಪನವರ ನೇತೃತ್ವದಲ್ಲಿ ಮಾಡುವುದಾಗಿ ತಿಳಿಸಿದರು.