ನವದೆಹಲಿ: ಟೀಂ ಇಂಡಿಯಾ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಬ್ಯಾಟಿಂಗ್‍ಗಾಗಿ ತಂಡದ ನಾಯಕತ್ವ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರು ಎಂದು ಬಿಸಿಸಿಐ ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಚಂದು ಬೋರ್ಡೆ ಹೇಳಿದ್ದಾರೆ.
ಟೀಂ ಇಂಡಿಯಾ ಪರ 24 ವರ್ಷ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್, ಬ್ಯಾಟ್ಸ್ ಮನ್ ಆಗಿ 100 ಶತಕ ಸಿಡಿಸಿದ್ದಾರೆ. ಆದರೆ ತಂಡದ ನಾಯಕರಾಗಿ ಸಚಿನ್ ಟೀಂ ಇಂಡಿಯಾಗೆ ಹೆಚ್ಚಿನ ಗೆಲುವು ತಂದುಕೊಡಲು ವಿಫಲರಾಗಿದ್ದರು. 1996-2000ರ ಅವಧಿಯಲ್ಲಿ ಸಚಿನ್ 25 ಟೆಸ್ಟ್, 73 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಆದರೆ ಇದರಲ್ಲಿ 4 ಟೆಸ್ಟ್, 23 ಏಕದಿನ ಪಂದ್ಯಗಳಲ್ಲಿ ಮಾತ್ರ ತಂಡ ಗೆಲುವು ಪಡೆದಿತ್ತು. ಪ್ರಮುಖವಾಗಿ 1999ರ ಆಸ್ಟ್ರೇಲಿಯಾ ಪ್ರವಾಸ ಬಳಿಕ ಸಚಿನ್ ನಾಯಕತ್ವದ ಸ್ಥಾನದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದರು.
ಆಸ್ಟ್ರೇಲಿಯಾ ಪ್ರವಾಸಕ್ಕೆ ಸಚಿನ್ ನಾಯಕತ್ವದಲ್ಲಿ ತಂಡವನ್ನು ಆಯ್ಕೆ ಮಾಡಿ ಕಳುಹಿಸಿಕೊಡಲಾಗಿತ್ತು. ಆದರೆ ಟೂರ್ನಿ ಮುಗಿಸಿ ಸ್ವದೇಶಕ್ಕೆ ಮರಳಿದ ಬಳಿಕ ನಾಯಕತ್ವದ ಜವಾಬ್ದಾರಿ ತೊರೆಯುತ್ತಿರುವುದಾಗಿ ಸಚಿನ್ ಹೇಳಿದ್ದರು. ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಸಚಿನ್ ಅಂದು ವಿವರಿಸಿದ್ದರು. ಆದರೆ ನಾನು ಆತನ ನಿರ್ಧಾರವನ್ನು ಬದಲಿಸಿಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದೆ. ನಾವು ಹೊಸ ನಾಯಕನ ಹುಡುಕಾಟದಲ್ಲಿದ್ದ ಕಾರಣ ಹೆಚ್ಚಿನ ಅವಧಿಯಲ್ಲಿ ಮುಂದುವರಿಯುವಂತೆ ಹೇಳಿದ್ದೇವು. ಆದರೆ ಸಚಿನ್ ಇದಕ್ಕೆ ಸಮ್ಮತಿ ಸೂಚಿಸದ ಕಾರಣ ನಮ್ಮ ಸಮಿತಿ ಕೂಡ ಗಂಗೂಲಿ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿತು ಎಂದು ಚಂದು ಬೋರ್ಡೆ ವಿವರಿಸಿದ್ದಾರೆ.
ಆಸ್ಟ್ರೇಲಿಯಾ ಟೂರ್ನಿಯಲ್ಲಿ ಸಚಿನ್ ಆಡಿದ್ದ ಮೂರು ಪಂದ್ಯಗಳಲ್ಲಿ 278 ರನ್ ಗಳಿಸಿದ್ದರು. ಆದರೂ ಟೀಂ ಇಂಡಿಯಾ 0-3 ಅಂತರದಲ್ಲಿ ಸಿರೀಸ್ ಸೋಲುಂಡಿತ್ತು. ಸಚಿನ್ ಅವರಿಗೆ ನಾಯಕತ್ವ ಹೆಚ್ಚಿನ ಒತ್ತಡ ಉಂಟು ಮಾಡಿತ್ತು ಎನಿಸಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ನಡೆದಿದ್ದ 2 ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲೂ ಭಾರತ 0-2 ಅಂತರದಲ್ಲಿ ಸೋಲುಂಡಿತ್ತು. ಇದಾದ ಬಳಿಕ ಸಚಿನ್ ನಾಯಕತ್ವವನ್ನು ಕೈಬಿಡುವ ನಿರ್ಧಾರ ಮಾಡಿದ್ದರು.