ಚಾಮರಾಜನಗರ: ಜಿಲ್ಲೆಯ ಗಡಿಯಂಚಿನಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯಿತು. ಸಗಣಿ ರಾಶಿ ಹಾಕಿ ಅದರಲ್ಲಿ ಗ್ರಾಮಸ್ಥರು ಹೊರಳಾಡಿ, ಹೊಡೆದಾಡುವುದೇ ಹಬ್ಬದ ವಿಶೇಷ.
ಕೋವಿಡ್ ಗೆ ಡೋಂಟ್ ಕೇರ್ ಎಂದು ಗ್ರಾಮಸ್ಥರು ಗುಂಪು ಸೇರಿ ಕಣಿದು ಕುಪ್ಪಳಿಸಿದರು. ಬಲಿಪಾಢ್ಯಮಿಯ ಮಾರನೇ ದಿನ ಈ ಗೊರೆ ಹಬ್ಬವನ್ನು ಆಚರಿಸಲಾಗತ್ತದೆ. ಅಚ್ಚ ಕನ್ನಡಿಗರೆ ಇರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ಸಹ ಸಂಪ್ರದಾಯದಂತೆ ಗೊರೆ ಹಬ್ಬ ಆಚರಿಸಲಾಯಿತು.
ಸಗಣಿಯಲ್ಲೇ ಹಿರಳಾಡಿ, ಹೊಡೆದಾಡುವುದು ಈ ಹಬ್ಬದ ವಿಶೇಷ. ಹಬ್ಬದ ದಿನ ಬೆಳಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ ಗಳ ಮೂಲಕ ತಂದು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕಲಾಗುತ್ತದೆ. ಇದಾದ ನಂತರ ಗ್ರಾಮದ ಹೊಳೆ ದಂಡೆಗೆ ಹೋಗಿ ಇಬ್ಬರು ವ್ಯಕ್ತಿಗಳಿಗೆ ಹುಲ್ಲಿನ ಮೀಸೆ ಗಡ್ಡವನ್ನು ಕಟ್ಟಿ ಹಣೆಗೆ ನಾಮ ಬಳಿದು ಅವರನ್ನು ಕತ್ತೆಯ ಮೇಲೆ ಕೂರಿಸಿ ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವವರನ್ನು ಕೊಂಡಕಾರರು ಎನ್ನಲಾಗುತ್ತದೆ.
ಕೊಂಡಕಾರ ಎಂದರೆ ಸುಳ್ಳುಗಾರ, ಚಾಡಿಕೋರ ಎಂದರ್ಥ. ಹಿಂದೆ ಸುಳ್ಳು ಹೇಳುವ ವ್ಯಕ್ತಿ ಗ್ರಾಮದ ಜನರಲ್ಲಿ ದ್ವೇಷಾಸೂಯೆ ಮೂಡಿಸಿ ಅಶಾಂತಿಗೆ ಕಾರಣವಾಗಿದ್ದ ಎನ್ನಲಾಗಿದೆ. ಅಂತಹ ವ್ಯಕ್ತಿಗಳಿಗೆ ಈ ರೀತಿ ಶಿಕ್ಷೆ ನೀಡಲಾಗುತ್ತಿತ್ತು ಎಂಬುದರ ಸಂಕೇತವಾಗಿ ಇಬ್ಬರಿಗೆ ಚಾಡಿಕೋರರ ವೇಷ ಧರಿಸಿ ಕತ್ತೆಯ ಮೇಲೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಸಗಣಿ ರಾಶಿ ಬಳಿ ಗ್ರಾಮದ ಜನ ಜಮಾಯಿಸುತ್ತಾರೆ. ಆಗ ಸಗಣಿಯಾಟ ಶುರುವಾಗುತ್ತದೆ. ಸಗಣಿ ರಾಶಿಯಲ್ಲಿ ಹೊರಳಾಡಿ, ಸಗಣಿಯಲ್ಲೇ ಗ್ರಾಮಸ್ಥರು ಹೊಡೆದಾಡುತ್ತಾರೆ. ದೊಡ್ಡ ಸಗಣಿ ಮುದ್ದೆಗಳನ್ನು ಮಾಡಿ ಒಬ್ಬರಿಗೊಬ್ಬರು ಹೊಡೆದುಕೊಂಡು ಖುಷಿಪಡುತ್ತಾರೆ.
ಸಗಣಿಯ ದೊಡ್ಡ ಮುದ್ದೆಗಳನ್ನು ಕಟ್ಟುವುದು ಅದನ್ನು ಮತ್ತೊಬ್ಬರ ಮೇಲೆ ಎಸೆಯುವ ದೃಶ್ಯ ನಗೆ ತರಿಸುತ್ತದೆ. ಸುಮಾರು ಎರಡು ಗಂಟೆಗಳ ಕಾಲ ನಡೆಯುವ ಈ ಸಗಣಿಯಾಟವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಜಮಾಯಿಸುತ್ತಾರೆ. ಸುತ್ತಲು ನೆರೆಯುವ ಜನ ಕಿರುಚಾಟ, ಘೋಷಣೆಗಳು ಗೊರೆ ಕಟ್ಟುವವರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.
ಹೀಗೆ ಸಗಣಿಯಿಂದ ಹೊಡೆದಾಡಿದರೆ ಚರ್ಮದ ಖಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆಯೂ ಇದೆ. ಬೀರೇಶ್ವರನಿಗೆ ಹರಕೆ ಹೊತ್ತವರು ಸಹ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ತಮ್ಮ ಮನದ ಬಯಕೆ ಈಡೇರುತ್ತದೆ ಎಂಬ ನಂಬಿಕೆ ಇದೆ.
ಹಿಂದೆ ಊರ ಗೌಡರ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿ ಮಹಾಶಿವಭಕ್ತನಾಗಿದ್ದನಂತೆ. ಆತನ ಮರಣ ನಂತರ ಆತನ ವಿಭೂತಿ, ರುದ್ರಾಕ್ಷಿ ಹಾಗೂ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತಂತೆ. ಕಾಲಾನಂತರ ಗೊಬ್ಬರಕ್ಕಾಗಿ ತಿಪ್ಪೆ ಅಗೆಯುತ್ತಿದ್ದಾಗ ಆ ಸ್ಥಳದಲ್ಲಿ ಲಿಂಗವೊಂದು ಉದ್ಭವವಾಗಿರುವುದು ಗೋಚರಿಸಿತು ಎಂಬ ನಂಬಿಕೆಯಿದೆ. ನಂತರ ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಅಂದಿನಿಂದ ಪ್ರತಿ ವರ್ಷ ಇಲ್ಲಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಸಗಣಿಯಾಟದಲ್ಲಿ ಜಾತಿ, ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಸಗಣಿಯಾಟಕ್ಕೂ ಮೊದಲು ದಲಿತ ವ್ಯಕ್ತಿಯೇ ಮೊದಲ ಪೂಜೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಹೀಗೆ ಪ್ರತಿ ವರ್ಷ ತಪ್ಪದೆ ಗೊರೆಹಬ್ಬ ಮಾಡುವುದರಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ. ಮಳೆಬೆಳೆ ಚನ್ನಾಗಿ ಆಗುತ್ತದೆ ಎಂಬ ನಂಬಿಕೆ ಇದೆ.