– ವಾಹನ ಸಂಚಾರ ನಿರ್ಬಂಧ, ಬದಲಿ ವ್ಯವಸ್ಥೆ
ಹಾಸನ: ಸಕಲೇಶಪುರ ನಗರದ ಶ್ರೀ ಸಕಲೇಶ್ವರ ಸ್ವಾಮಿಯ ರಥೋತ್ಸವ ಫೆ.28 ರಂದು ನಡೆಯಲಿದೆ. ಹೀಗಾಗಿ ಬೆಂಗಳೂರು-ಮಂಗಳೂರು ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ರಥೋತ್ಸವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶ್ವರ ಸ್ವಾಮಿ ದೇವಸ್ಥಾನದ ವೃತ್ತದಿಂದ ಪುರಸಭೆವರೆಗೆ ಸಾಗಲಿದೆ. ಈ ಸಮಯದಲ್ಲಿ ಸುಮಾರು ಹತ್ತರಿಂದ ಹದಿನೈದು ಸಾವಿರ ಭಕ್ತರು ಸೇರಲಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸಾಧ್ಯವಾಗದೇ ಇರುವ ಕಾರಣ, ಫೆಬ್ರವರಿ 28 ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಸಕಲೇಶಪುರ ನಗರದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಎಸ್‍ಅರ್ ಟಿಸಿ ಬಸ್ ಹೊರತು ಪಡಿಸಿ ಬೇರೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ಲಘು ವಾಹನಗಳು ಸಕಲೇಶಪುರ ನಗರದ ಪಶು ಚಿಕಿತ್ಸಾಲಯದ ಕಡೆಯಿಂದ ಹಳೆ ಸಂತೆ ಮೇರಿ ರಸ್ತೆಯಲ್ಲಿ ಪ್ರವೇಶಿಸಿ ಆಜಾದ್ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದು ಹೋಗಲು ಸೂಚಿಸಿದೆ. ಅದೇ ರೀತಿ ಹಾಸನದಿಂದ ಬರುವ ವಾಹನಗಳು, ಬಸವೇಶ್ವರ ರಸ್ತೆಯ ಮೂಲಕ ಕಾಸ್ಮೋಪಾಲಿಟನ್ ಕ್ಲಬ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 75 ಪ್ರವೇಶಿಸಲು ತಿಳಿಸಲಾಗಿದೆ.
ಮಂಗಳೂರಿನಿಂದ ಹಾಸನಕ್ಕೆ ಸಂಚರಿಸುವ ವಿವಿಧ ಮಾದರಿಯ ಟ್ರಕ್, ಟ್ಯಾಂಕರ್ ಇತರೆ ಭಾರಿ ವಾಹನಗಳು ಮಾರನಹಳ್ಳಿ ಬಳಿ ನಿಲ್ಲಿಸಲು ಸೂಚಿಸಿದೆ. ಹಾಸನದ ಕಡೆಯಿಂದ ಬರುವ ವಾಹನಗಳನ್ನು ಪೇಟೆಯ ಬಳಿ ನಿಲ್ಲಿಸಲು ಸೂಚಿಸಿದೆ. ಸಂಜೆ ರಥೋತ್ಸವ ಸಂಚರಿಸುವ ವೇಳೆ ಪರಿಸ್ಥಿತಿ ಅವಲೋಕಿಸಿ ಬಾರಿ ವಾಹನ ಸಂಚರಿಸಲು ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.