– ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರೋ ಸೋಂಕು
ರಾಯಚೂರು: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಿದ್ದರೂ ಜನರ ನಿರ್ಲಕ್ಷ್ಯಕ್ಕೆ ಮಾತ್ರ ಯಾವುದೇ ಲಾಕ್ ಬಿದ್ದಿಲ್ಲ. ಗ್ರಾಮೀಣ ಭಾಗದಲ್ಲಿ ಈಗಲೂ ಅದ್ಧೂರಿಯಾಗಿ ಮದುವೆಗಳು ನಡೆಯುತ್ತಿದ್ದು ಸೋಂಕು ಹರಡುವಿಕೆಗೆ ಹಳ್ಳಿಜನ ಕಾರಣರಾಗುತ್ತಿದ್ದಾರೆ. ದೇವದುರ್ಗ ತಾಲೂಕಿನ ಆಕಳಕುಂಪಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಮದುವೆಯನ್ನ ಅದ್ಧೂರಿಯಾಗಿ ಮಾಡಲಾಗಿದ್ದು, ನೂರಾರು ಜನ ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿ ಭಾಗವಹಿಸಿದ್ದಾರೆ.
ಈಗಾಗಲೇ ಆಕಳಕುಂಪಿ ಗ್ರಾಮದಲ್ಲಿ ಬರೋಬ್ಬರಿ 37 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಊರಲ್ಲಿ ಸೋಂಕು ಹರಡುತ್ತಿದ್ದರೂ ಮೈಮರೆತು ಅದ್ಧೂರಿ ಮದುವೆ ಮಾಡಿದ್ದಾರೆ. ಗ್ರಾಮದ ಒಂದೇ ಕುಟುಂಬದ ನಾಲ್ಕು ಜನರ ಮದುವೆ ಒಟ್ಟಿಗೆ ನಡೆದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ನೂರಾರು ಜನರು ಮದುವೆಯಲ್ಲಿ ಭಾಗವಹಿಸಿದ್ದರು.
ಮದುವೆ ನಂತರ ಗ್ರಾಮದಲ್ಲಿ ಭರ್ಜರಿ ಮೆರವಣಿಗೆ ಮಾಡಲಾಗಿದೆ. ಡಿಜೆ ಹಾಕಿ ಮೆರವಣಿಗೆಯಲ್ಲಿ ಯುವಕರು ಕುಣಿದಿದ್ದಾರೆ. ಗ್ರಾಮದಲ್ಲಿ ಸಾಕಷ್ಟು ಪಾಸಿಟಿವ್ ಪ್ರಕರಣಗಳಿದ್ರೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ. ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 853 ಗ್ರಾಮಗಳಿದ್ದು ಬಹುತೇಕ ಹಳ್ಳಿಗಳು ಕೊರೊನಾ ಸೋಂಕಿಗೆ ಒಳಗಾಗಿವೆ. ಮದುವೆ ಸಮಾರಂಭಗಳಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ.