ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ನನ್ನು ಪಕ್ಷದಿಂದ ಉಚ್ಛಾಟಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಬಳಿ ಮನವಿ ಮಾಡುತ್ತೇನೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಅಪರಾಧಿ ಅಪರಾಧಿನೆ. ಯಾರೇ ಅಪರಾಧಿ ಆಗಿದ್ದರೂ ಶಿಕ್ಷೆ ಕೊಡಬೇಕು. ನಾನು ಯಾರ ಜೊತೆಗೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಶಾಸಕನಾಗಿ ಕೆಲಸ ಮಾಡಿಲ್ಲ. ಪಬ್ಲಿಕ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ನಾನು ಎಲ್ಲಾ ವಾರ್ಡಿನಲ್ಲಿ ಕಾರ್ಪೊರೇಟರ್ ಗಳ ಜೊತೆ ಚೆನ್ನಾಗೆ ಇದ್ದೆ. ಕಾರ್ಯಕ್ರಮಗಳಿಗೆ ಅವರ ಜೊತೆಗೆ ಪೂಜೆ ಮಾಡುತ್ತಿದ್ದೆ. ನನ್ನನ್ನು ಹತ್ಯೆ ಮಾಡುವಂತದ್ದು ಏನು ಮಾಡಿದ್ದೆ. ಸಂಪತ್ ರಾಜುನಾ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತ ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಬಳಿ ಹೋಗಿ ಒತ್ತಾಯ ಮಾಡ್ತೀನಿ. ನನ್ನ ಪ್ರಾಣ ತೆಗಿಯಲು ಮುಂದಾಗಿದ್ದರು ಅವರನ್ನ ಪಕ್ಷದಿಂದ ಉಚ್ಚಾಟಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಶಾಸಕ ಅಖಂಡ ಮನೆಗೆ ಕಾಂಗ್ರೆಸ್ಸಿಗರಿಂದಲೇ ಬೆಂಕಿ
ನಾನು ಪಕ್ಷ ಸೇರುವಾಗ ಸೇರಿಸಿಕೊಳ್ಳಬಾರದು ಅಂತ ಗಲಾಟೆ ಮಾಡಿದ್ದರು. ಆದರೆ ಚಾರ್ಜ್ ಶೀಟ್ ನೋಡಿದ್ರೆ ಹೀಗೆ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಅಂತವರಿಂದ ಪಕ್ಷಕ್ಕೆ ಕೆಟ್ಟ ಹೆಸರು ಅಂತವರು ಪಕ್ಷದಲ್ಲಿ ಇರಬಾರದು. ನಾಳೆ ಡಿಕೆಶಿಯನ್ನ ಭೇಟಿ ಮಾಡಿ ಮಾತಾಡುತ್ತೇನೆ. ನನ್ನ ಮನವಿಗೆ ಸ್ಪಂದಿಸ್ತಾರೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.