– ಮುಷ್ಕರ ಮುಂದುವರಿಯುತ್ತೆ ಅಂದ್ರು ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು: ಸರ್ಕಾರದ ಜೊತೆಗಿನ ಸಂಧಾನ ಯಶಸ್ವಿ ಆಯ್ತಾ ಅಥವಾ ವಿಫಲವಾಯ್ತಾ ಅನ್ನೋದರ ಬಗ್ಗೆ ಸಾರಿಗೆ ನೌಕರರಲ್ಲಿ ಗೊಂದಲ ಉಂಟಾಗಿದೆ. ಸಂಧಾನ ವಿಫಲವಾಗಿದ್ದು ಸಿಬ್ಬಂದಿ ವಾಹನಗಳನ್ನ ಹೊರಗೆ ತೆಗೆಯಬೇಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದ್ದಾರೆ.
ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ನೌಕರ ಸಂಘದ ಮುಖಂಡ, ನಾನು ಮಾಧ್ಯಮಗಳಲ್ಲಿ ಯಾವುದೇ ರೀತಿಯ ಹೇಳಿಕೆಯನ್ನ ನೀಡಿಲ್ಲ. ಸರ್ಕಾರ ನೀಡಿರುವ ಕೆಲ ಭರವಸೆಗಳ ಬಗ್ಗೆ ಮಾತ್ರ ಹೇಳಿದ್ದೇನೆ. ನಮ್ಮ ಪ್ರಮುಖ ಬೇಡಿಕೆಯನ್ನ ಈಡೇರಿಸಲು ಸರ್ಕಾರ ಒಪ್ಪಿಲ್ಲ. ಆದ್ರೆ ಸಚಿವರು ಸಂಧಾನ ಯಶಸ್ವಿ ಅಂತಾ ಹೇಳಿದ್ದರಿಂದ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದೆ. ಹಾಗಾಗಿ ಇಲ್ಲಿ ನಿಮ್ಮ ಮುಂದೆ ಸಂಧಾನ ವಿಫಲವಾಗಿದೆ ಎಂದು ಹೇಳುತ್ತಿದ್ದೇನೆ. ನಿಮ್ಮ ಸ್ನೇಹಿತರಿಗೆ ಬಸ್ ಗಳನ್ನ ಹತ್ತಬಾರದು ಎಂದು ಹೇಳಿ ಎಂದ್ರು.
ಇನ್ನೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯಾವುದೇ ಕಾರಣಕ್ಕೂ ಬಸ್ ಗಳನ್ನ ರಸ್ತೆಗಿಳಿಸಬೇಡಿ. ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲ. ಮುಷ್ಕರ ಮುಂದುವರಿಯಲಿದೆ ಎಂದು ಘೋಷಣೆ ಮಾಡಿದರು.
ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಉಳಿದಂತೆ 8 ಬೇಡಿಕೆಯನ್ನು ಸರ್ಕಾರ ಈಡೇರಿಸುವ ಭರವಸೆಯನ್ನು ನೀಡಿದೆ. ಇದನ್ನೂ ಓದಿ: ಸರ್ಕಾರದ ಸಂಧಾನ ಯಶಸ್ವಿ – ಪ್ರತಿಭಟನೆ ಕೈ ಬಿಟ್ಟ ನೌಕರರು
ಈಡೇರಿಕೆಯಾದ ಬೇಡಿಕೆಗಳು
1. ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಸಲು ತೀರ್ಮಾನ.
2. ಕೋವಿಡ್-19 ಸೋಂಕಿನಿಂದ ಮೃತ ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ.
3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ.
4. ನೌಕರರ ತರಬೇತಿ ಅವಧಿ 2 ರಿಂದ ಒಂದು ವರ್ಷಕ್ಕೆ ಇಳಿಕೆ.
5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್. (ಮಾನವ ಸಂಪನ್ಮೂಲ) ವ್ಯವಸ್ಥೆ ಜಾರಿ.
6. ಸಿಬ್ಬಂದಿಯ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ನಿರ್ಧಾರ.
7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ.
8. ವೇತನ ಪರಿಷ್ಕರಣೆ, ಆರನೇ ವೇತನ ಆಯೋಗದ ಜಾರಿ ನಡೆಸುವ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ತೀರ್ಮಾನ