– ಮನೆಯಲ್ಲೇ ವಿವಾಹವಾದ ಕೃಷ್ಣ, ಐಶ್ವರ್ಯ
ಉಡುಪಿ: ಭಾನುವಾರದ ಕೊರೊನಾ ಕರ್ಫ್ಯೂ ನಡುವೆ ಉಡುಪಿ ಜಿಲ್ಲೆಯಲ್ಲಿ 27 ಜೋಡಿಗಳು ಹಸೆಮಣೆಗೆ ಏರಿವೆ. ರಾಜ್ಯ ಸರ್ಕಾರ ಭಾನುವಾರ ಕಠಿಣ ಕರ್ಫ್ಯೂ ಘೋಷಣೆ ಮಾಡಿದರೂ ಮೊದಲೇ ನಿರ್ಧಾರವಾದ ಮದುವೆಗಳಿಗೆ ಅನುಮತಿ ಕೊಟ್ಟಿತ್ತು. ಹೀಗಾಗಿ ಜಿಲ್ಲೆಯಲ್ಲಿ ಮದುವೆ ನಿಶ್ಚಿತಾರ್ಥ ಸೇರಿದಂತೆ 27 ಶುಭ ಕಾರ್ಯಗಳು ನಡೆದಿದೆ.
ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ತಲಾ ಆರು ಮದುವೆಗಳಾಗಿದೆ. ಉಡುಪಿ ಮತ್ತು ಬೈಂದೂರಿನಲ್ಲಿ ತಲಾ ನಾಲ್ಕು ಮದುವೆಗಳಾಗಿದ್ದು, ನಿಶ್ಚಿತಾರ್ಥ ಮತ್ತು ರಿಸೆಪ್ಷನ್‍ಗಳು ಕಾಪು ತಾಲೂಕು ಮತ್ತು ಬ್ರಹ್ಮಾವರದಲ್ಲಿ ನಡೆದಿದೆ. ತಹಶೀಲ್ದಾರ್ ಎಲ್ಲ ಕಾರ್ಯಕ್ರಮಗಳಿಗೆ ಪರವಾನಿಗೆ ಕೊಟ್ಟ ನಂತರ ಶುಭ ಕಾರ್ಯಗಳು ನೆರವೇರಿದೆ.
Advertisement
Advertisement
ಉಡುಪಿ ಅಂಬಲಪಾಡಿಯಲ್ಲಿ ಕೃಷ್ಣದಾಸ್ ಮತ್ತು ಐಶ್ವರ್ಯ ಮನೆಯಲ್ಲೇ ಸತಿಪತಿಗಳಾದರು. ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿರುವ ಕೃಷ್ಣ ದಾಸ್ ಎರಡು ತಿಂಗಳ ಹಿಂದೆ ಮದುವೆ ತಯಾರಿಗೆ ಬಂದವರು ಊರಲ್ಲೇ ಲಾಕ್ ಆಗಿದ್ದರು. ಐಶ್ವರ್ಯ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಟೀಚಿಂಗ್ ಮಾಡುತ್ತಿದ್ದಾರೆ. ಉಡುಪಿಯ ಶ್ರೀಕೃಷ್ಣ ಸಭಾದಲ್ಲಿ ಮದುವೆ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ ಸರ್ಕಾರ ಏಕಾಏಕಿ ಕರ್ಫ್ಯೂ ಹೇರಿದೆ. ಹಾಗಾಗಿ ಮದುವೆಯನ್ನು ಹಾಲ್‍ನಿಂದ ಮನೆಗೆ ಶಿಫ್ಟ್ ಮಾಡಲಾಯಿತು.
Advertisement
ಒಂದು ಸಾವಿರ ಮಂದಿ ಸಂಬಂಧಿಕರು, ಗೆಳೆಯರು ಆಪ್ತರು ನೆರೆಹೊರೆಯವರು ಸೇರಿ ಮದುವೆ ಮಾಡುವುದಾಗಿ ನಿಶ್ಚಯ ಮಾಡಿದ್ದೆವು. ಆದರೆ ಸರ್ಕಾರದ ನಿಯಮಕ್ಕೆ ಬೆಲೆ ಕೊಡುವುದು ಅಗತ್ಯ. ಈ ಸಂಖ್ಯೆಯನ್ನು 40 ರಿಂದ 50ಕ್ಕೆ ಇಳಿಸಿದೆವು. ಮನೆಯಲ್ಲೇ ಮದುವೆ ಮಾಡುವುದಾಗಿ ಗುರು ಹಿರಿಯರು ತೀರ್ಮಾನ ಮಾಡಿದ್ದರು ಎಂದು ಸಂಬಂಧಿ ಸುಮನ್ ಹೇಳಿದರು.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೃಷ್ಣದಾಸ್, ಅದ್ಧೂರಿಯಾಗಿ ಮದುವೆ ಆಗಬೇಕು ಎಂದು ಆಸೆ ಇತ್ತು. ಆದರೆ ನಮ್ಮ ಖುಷಿಗಿಂತ ದೇಶದ ಹಿತ ಮುಖ್ಯ. ನಾವು ಬಹಳ ಸಿಂಪಲ್ಲಾಗಿ ಮದುವೆ ಆಗುತ್ತಿದ್ದೇವೆ ಎಂದರು. ಐಶ್ವರ್ಯ ಮಾತನಾಡಿ, ನನ್ನ ಯಾವ ಗೆಳೆಯ ಗೆಳತಿಯರು ಮದುವೆಗೆ ಬಂದಿಲ್ಲ. ಕುಟುಂಬದಲ್ಲೂ ಕೂಡ ಹತ್ತಿರ ಸಂಬಂಧಿಗಳು ಮಾತ್ರ ಬಂದಿದ್ದಾರೆ. ಸಿಂಪಲ್ಲಾಗಿ ಮದುವೆಯಾಗಿದ್ದೇವೆ ಎಂಬ ಖುಷಿ ಇದೆ. ಸಾಂಪ್ರದಾಯಿಕವಾಗಿ ಹಿಂದೆ ತೀರ್ಮಾನಿಸಿದ ದಿನಾಂಕದಂದೇ ಮದುವೆಯಾಗಿದ್ದೇವೆ ಎಂದು ಖುಷಿ ಹಂಚಿಕೊಂಡರು.