ಬೆಂಗಳೂರು: ಲಾಕ್‍ಡೌನ್ ನಡುವೆಯೂ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದಿರುವ ಘಟನೆ ನಗರದ ಜಾಲಹಳ್ಳಿ ಬಳಿ ನಡೆದಿದೆ.
ಆರೋಪಿಗಳಾದ ಭರತ್ ಮತ್ತು ಅರುಣ್ ಕುಮಾರ್ ಮೇಲೆ ಸೋಲದೇವನಹಳ್ಳಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಜಾಲಹಳ್ಳಿ ಬಳಿ ಆರೋಪಿಗಳನ್ನು ಬಂಧಿಸಲು ಹೋದ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಆರೋಪಿಗಳಾದ ಭರತ್ ಮತ್ತು ಅರುಣ್ ಕುಮಾರ್ ಕಳೆದ 23 ರಂದು ಹೆಸರಗಟ್ಟ ನಿವಾಸಿ ರಾಜಶೇಖರ್ ಮೇಲೆ ಅಟ್ಯಾಕ್ ಮಾಡಿ ಕೊಲೆಗೆ ಯತ್ನಿಸಿದ್ದರು. ಆರೋಪಿಗಳು ರಾಜಶೇಖರ್ ಸಂಬಂಧಿ ಶ್ರೀನಿವಾಸ್‍ನಿಂದ ಕೊಲೆಗೆ ಸುಫಾರಿ ಪಡೆದಿದ್ದರು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರುದಾರ ರಾಜಶೇಖರ್ ಮತ್ತು ಆರೋಪಿ ಶ್ರೀನಿವಾಸ್ ನಡುವೆ ವ್ಯಾಜ್ಯವಿತ್ತು ಎಂದು ತಿಳಿದು ಬಂದಿದೆ.
ಆದರೆ ಭರತ್ ಮತ್ತು ಅರುಣ್ ಕುಮಾರ್ ಹತ್ತು ಲಕ್ಷ ಹಣಕ್ಕೆ ಸುಫಾರಿ ಪಡೆದು ಕೊಲೆಗೆ ಯತ್ನಿಸಿ ಎಸ್ಕೇಪ್ ಆಗಿದ್ದರು. ಖಚಿತ ಮಾಹಿತಿ ಮೇರೆಗೆ ಜಾಲಹಳ್ಳಿ ಬಳಿ ಬಂಧಿಸಲು ಹೋದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.
ಫೈರಿಂಗ್ ವೇಳೆ ಇಬ್ಬರು ಪೊಲೀಸ್ ಪೇದೆಗಳಿಗೆ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಸಹ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.