ಸಂಜೆವರೆಗೆ ಎಪಿಎಂಸಿ ತೆರೆಯಲು ಸರ್ಕಾರದ ಮಟ್ಟದಲ್ಲಿ ಚರ್ಚೆ: ಶೆಟ್ಟರ್

Public TV
2 Min Read
hbl shettar

ಹುಬ್ಬಳ್ಳಿ: ನಗರದ ಎಪಿಎಂಸಿ ಸೇರಿದಂತೆ ಇತರೆ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ನಿಯಂತ್ರಿಸಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರಕ್ಕೆ ಒತ್ತು ನೀಡಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿ ಕೊಡಲಾಗಿದೆ. ಜನದಟ್ಟಣೆ ಹೆಚ್ಚುತ್ತಿರುವುದರಿಂದ ಎಪಿಎಂಸಿಗಳನ್ನು ಸಂಜೆವರೆಗೆ ತೆರೆಯುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

hbl apmc 1

ನಗರದ ಎಪಿಎಂಸಿ, ಗಿರಣಿಚಾಳ ಹಾಗೂ ಸಿದ್ಧಾರೂಢ ಮಠದ ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಖರೀದಿಗೆ ಬರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಬೆಳಗಿನಿಂದಲೇ ಸ್ಥಳದಲ್ಲಿ ಇದ್ದು ಜನದಟ್ಟಣೆಯನ್ನು ನಿಯಂತ್ರಿಸುತ್ತಿದ್ದಾರೆ. ಬೆಳಗಿನ ವ್ಯಾಪರ ವಹಿವಾಟಿನ ಸಮಯವನ್ನು ಹೆಚ್ಚಿಸುವಂತೆ ಹಾಗೂ ಎಪಿಎಂಸಿ ಮಾರುಕಟ್ಟೆಗಳನ್ನು ಸಂಜೆಯವರೆಗೆ ತೆರೆಯಲು ಅವಕಾಶ ನೀಡುವಂತೆ ರಾಜ್ಯದಾದ್ಯಂತ ಬೇಡಿಕೆಗಳು ಬರುತ್ತಿವೆ. ಈ ಕುರಿತು ಸರ್ಕಾರದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಹುಬ್ಬಳ್ಳಿಯ ಎಪಿಎಂಸಿ ಏಷ್ಯಾದ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆಯಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ತರಕಾರಿ ವ್ಯಾಪಾರ ನೆಡೆಯುತ್ತದೆ. ಕಳೆದ ಬಾರಿಯ ಲಾಕ್‍ಡೌನ್ ಸಂದರ್ಭದಲ್ಲಿ ಇಕ್ಕಟ್ಟಿನ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಇದರಿಂದ ಜನದಟ್ಟಣೆ ಉಂಟಾಗಿ ಬಹಳ ತೊಂದರೆಯಾಗಿತ್ತು. ಇದನ್ನು ಸರಿಪಡಿಸುವಂತೆ ಎಪಿಎಂಸಿ ಸದಸ್ಯರು, ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅದರಂತೆ ವಿಶಾಲ ಪ್ರದೇಶದಲ್ಲಿ ಮಾರುಕಟ್ಟೆ ಸ್ಥಾಪಿಸಿ ನಿಯಂತ್ರಣ ಮಾಡುತ್ತಿದ್ದಾರೆ ಎಂದು ವಿವರಿಸಿದರು.

hbl apmc 3

ಉಪಚುನಾವಣೆಯಲ್ಲಿ ಬಿಜೆಪಿಗೆ ಜಯ
ರಾಜ್ಯದಲ್ಲಿ ನಡೆದ ಬೆಳಗಾವಿ ಲೋಕಸಭಾ ಹಾಗೂ ಎರಡು ವಿಧಾನಸಭಾ ಉಪ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಉತ್ತಮ ಫಲಿತಾಂಶ ಬಿಜೆಪಿಗೆ ಲಭಿಸಲಿದೆ. ಪಾಂಡಿಚೇರಿ ಹಾಗೂ ಅಸ್ಸಾಂ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ಉಳಿದ ರಾಜ್ಯಗಳಲ್ಲೂ ಉತ್ತಮ ಪಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಎಪಿಎಂಸಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಮಾರುಕಟ್ಟೆ ಶುಲ್ಕ ಸಂಗ್ರಹದಿಂದ ಬರುವ ಹಣದಲ್ಲಿ ವ್ಯಾಪಾರಿಗಳಿಗೆ, ರೈತರಿಗೆ ಹಾಗೂ ಮಾರಾಟಗಾರರಿಗೆ ಮಾಸ್ಕ್ ವಿತರಿಸುವಂತೆ ಸೂಚನೆ ನೀಡಿದರು. ಸಿದ್ಧಾರೂಢ ಮಠ ರಥ ಬೀದಿಯಲ್ಲಿನ ಮಾರುಕಟ್ಟೆ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಮಠದ ಆವರಣದಲ್ಲಿ ಮಾರುಕಟ್ಟೆ ನೆಡೆಸುವಂತೆ ಮನವಿ ಮಾಡಿದರು.

hbl apmc 2

ಪೋಲಿಸ್ ಆಯಕ್ತ ಲಾಭುರಾಮ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಉಪ ಪೊಲೀಸ್ ಆಯುಕ್ತ ರಾಮರಾಜನ್, ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ, ಉಪಾಧ್ಯಕ್ಷ ಬಸವರಾಜ ನಾಯ್ಕರ್, ವರ್ತಕರ ಪ್ರತಿನಿಧಿ ಚನ್ನು ಹೊಸಮನಿ, ಇತರೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *