ಬೆಂಗಳೂರು: ನಟಿ ರಾಗಿಣಿ ಮತ್ತು ಸಂಜನಾ ಸಲ್ಲಿಸಿರುವ ಬೇಲ್ ಅರ್ಜಿಯ ವಿಚಾರಣೆ ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟ್ ನಾಳೆಗೆ ಮುಂದೂಡಿಕೆಯಾಗಿದೆ.
ಸದ್ಯ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸೋಮವಾರ ರಾಗಿಣಿ ಮತ್ತು ಸಂಜನಾ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ರಾಗಿಣಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇತ್ತ ಸಂಜನಾ ಗಲ್ರಾನಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಸಿಬಿ ಪರ ವಕೀಲರು ಸಮಯಾವಕಾಶ ಕೇಳಿದ್ದರು. ಇಂದು ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಇನ್ನುಳಿದ ಆರೋಪಿಗಳ ಅರ್ಜಿ ನ್ಯಾಯಾಲಯದ ಮುಂದೆ ಬಂದಿತ್ತು.
Advertisement
Advertisement
ಸಂಜನಾ ಪರ ವಕೀಲ ಶ್ರೀನಿವಾಸ್ ಮೂರ್ತಿ, ರವಿಶಂಕರ್ ಹೇಳಿಕೆಯನ್ನು ಎಸಿಪಿ ಗೌತಮ್ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ನಗರದ ವಿವಿಧೆಡೆ ಪಾರ್ಟಿ ನಡೆಸಿರುವುದಾಗಿ ಹೇಳಿದ್ದಾರೆ. ಈ ಸ್ಟೇಟ್ ಮೆಂಟ್ ಬಿಟ್ಟರೆ ಯಾವುದೇ ಮಟಿರಿಯಲ್ ಇಲ್ಲ. ಕೇವಲ ರವಿಶಂಕರ್ ಹೇಳಿಕೆ ಆಧಾರದ ಮೇಲೆ ಎಫ್‍ಐಆರ್ ಮಾಡಲಾಗಿದೆ. ದಾಖಲಾಗಿರುವ ಎಫ್‍ಐಅರ್ ನಲ್ಲಿ ಅನೇಕ ಸೆಕ್ಷನ್ ಗಳನ್ನ ಹಾಕಲಾಗಿದೆ. ಆದ್ರೆ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಾದ ಮಂಡಿಸಿದರು.
Advertisement
Advertisement
ಎಕ್ಸ್ ಟೆಸಿ ಮಾತ್ರೆ ಸೇವಿಸಿದ್ದಾರೆಂದು ಆರೋಪಿಸಲಾಗಿದ್ದು, ಎಫ್‍ಐಆರ್ ನಲ್ಲಿ ನಿರ್ದಿಷ್ಟ ಆರೋಪಗಳೇ ಇಲ್ಲ. ಎಕ್ಸ್ ಟೆಸಿ ಮಾತ್ರೆಯ ಪ್ರಸ್ತಾಪ ಬಿಟ್ಟರೇ ಬೇರೆ ಯಾವುದೇ ಆರೋಪಗಳಿಲ್ಲ. ಇತರೆ ಆರೋಪಿಗಳ ಹೇಳಿಕೆಯ ಮೇಲೆ ಪ್ರಕರಣ ನಿಂತಿದೆ. ಆದ್ರೆ ಸಂಜನಾ ಗಲ್ರಾನಿ ಅವರನ್ನ ಯಾಕೆ ಬಂಧಿಸಲಾಗಿದೆ ಎಂಬುವುದು ಇದುವರೆಗೂ ಗೊತ್ತಾಗಿಲ್ಲ. ಕಕ್ಷಿದಾರರಿಗೆ ಬಂಧನ ವೇಳೆ ಯಾಕೆ ಅರೆಸ್ಟ್ ಮಾಡಲಾಗ್ತಿದೆ ಅಂತ ಹೇಳಿಲ್ಲ. ಹಾಗಾಗಿ ಸಂಜನಾ ಗಲ್ರಾನಿ ಅವರ ಬಂಧನ ಕಾನೂನೂ ಬಾಹಿರವಾಗಿದ್ದು, ಇಲ್ಲಿಯವರೆಗೂ ಪೊಲೀಸರು ನ್ಯಾಯಾಲಯದ ಮುಂದೆ ಯಾವ ಸಾಕ್ಷ್ಯವನ್ನ ಹಾಜರುಪಡಿಸಿಲ್ಲ. ಇದೇ ವೇಳೆ ವಕೀಲರು ಕೆಲ ಹಳೆ ಪ್ರಕರಣಗಳ ಉದಾಹರಣೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಸಿಸಿಬಿ ಪರ ವಕೀಲರು, ನ್ಯಾಯಾಲಯ ಮುಂದೆ ಮುಚ್ಚಿದ ಲಕೋಟೆಯಲ್ಲಿ ಕೆಲ ಸಿಡಿಗಳನ್ನು ಸಲ್ಲಿಸಿದರು. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಸಿಡಿಯಲ್ಲಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆರೋಪಿ ರವಿಶಂಕರ್ ಹೇಳಿಕೆಯ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ವಿಚಾರಣೆ ವೇಳೆ ಬಯಲಿಗೆ ಬಂದ ಅಂಶಗಳ ಮೇಲೆ ತನಿಖೆ ನಡೆಯುತ್ತಿದೆ. ಡ್ರಗ್ ಸೇವನೆ ಮಾಡಿರುವುದೇ ಒಳ್ಳೆಯ ಎವಿಡೆನ್ಸ್ ಆಗುತ್ತೆ. ತನಿಖೆ ಮುಗಿಯುವ ಮುನ್ನವೇ, ಜಾಮೀನು ನೀಡುವುದು ಸರಿಯಲ್ಲ. ಕೊಕೇನ್ ಮತ್ತು ಇತರೆ ಪಿಲ್ ಸರಬರಾಜಿನ ಬಗ್ಗೆ ರವಿಶಂಕರ್ ಮಾಹಿತಿ ನೀಡಿದ್ದಾನೆ. ಇದೇ ವೇಳೆ ರವಿಶಂಕರ್ ಗೆ ಪ್ರತೀಕ್ ಶೆಟ್ಟಿ, ವೈಭವ್ ಜೈನ್ ಪರಿಚಯವಾದ ಬಗ್ಗೆ ವಿವರಣೆಯನ್ನು ನ್ಯಾಯಲಯಕ್ಕೆ ನೀಡಿದರು.
ಎಲ್ಲಾ ಆರೋಪಿಗಳ ಮೊಬೈಲ್ ಸದ್ಯ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿನ ಮೆಸೇಜ್ ನಮಗೆ ಈ ಡ್ರಗ್ ವ್ಯವಹಾರದ ಬಗ್ಗೆ ತಿಳಿಸುತ್ತಿದೆ. ಕೆಲವರ ಮೊಬೈಲ್ ರಿಟ್ರಿವ್ ಮಾಡಿದ ಬಳಿಕ ಮತ್ತಷ್ಟು ಸಾಕ್ಷಿ ಲಭ್ಯವಾಗಲಿದೆ. ಅಲ್ಲದೇ ಆರೋಪಿ ಪೆಪ್ಪರ್ ನ ಬಂಧಿಸಿದಾಗ ಡ್ರಗ್ ಪತ್ತೆಯಾಗಿದೆ. ಆ ಆರೋಪಿಯ ಜೊತೆ ರಾಗಿಣಿ ಸೇರಿದಂತೆ ಎಲ್ಲರೂ ಸಂಪರ್ಕದಲ್ಲಿದ್ದಾರೆ. ಇನ್ನೂ ಎನ್ ಡಿಪಿಎಸ್ ಪ್ರಕಾರ 10 ಗ್ರಾಂ ಕಮರ್ಷಿಯಲ್ ಆಗುತ್ತದೆ ಎಂದು ವಾದಿಸಿದರು.
ಇನ್ನೂ ಸಂಜನಾ ಮತ್ತು ರಾಗಿಣಿ ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿದ್ದರು. ಬಳಿಕ ಮನವೊಲಿಕೆ ನಂತರವಷ್ಟೇ ಸ್ಯಾಂಪಲ್ ನೀಡಿದರು. ರಕ್ತ, ಮೂತ್ರ, ಕೂದಲು ಮಾದರಿ ನೀಡಲು ಸಂಜನಾ ರಾಗಿಣಿ ನಿರಾಕರಿಸಿದ್ದರು. ಇನ್ನೂ ಆರೋಪಿ ರಾಗಿಣಿ ಮೂತ್ರದ ಬದಲಿಗೆ ನೀರು ತುಂಬಿ ನೀಡಿದ್ದರು. ಹಾಗಾಗಿ ತನಿಖೆ ವೇಳೆ ಜಾಮೀನು ನೀಡಬಾರದು ಎಂದು ಸಿಸಿಬಿ ಪರ ವಕೀಲರು ತಮ್ಮ ವಾದವನ್ನು ನ್ಯಾಯಾಲಯದ ಮುಂದೆ ಇರಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಜಾಮೀನು ಅರ್ಜಿ ವಿಚಾರಣೆ 28 ಕ್ಕೆ ಮುಂದೂಡಿಕೆಯಾಗಿದೆ. ಆರೋಪಿಗಳಾದ ನಿಯಾಜ್ ಅಹಮ್ಮದ್ ಮತ್ತು ವೈಭವ್ ಜೈನ್ ಜಾಮೀನು ಅರ್ಜಿ ಸಹ ಸೆಪ್ಟೆಂಬರ್ 29ಕ್ಕೆ ಮುಂದೂಡಿಕೆಯಾಗಿದೆ.