ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ಅವರ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮುಂದೆ ಬಂದಿದ್ದಾರೆ.
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ನಟ ಸಂಚಾರಿ ವಿಜಯ್ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ. ಈ ಮಧ್ಯೆ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮುಂದೆ ಬಂದು ಭರವಸೆಯನ್ನು ನೀಡಿದ್ದಾರೆ.
ಇಂದು ಬೆಳಗ್ಗೆ ವಿಜಯ್ ಅವರು ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಆಡಳಿತ ವರ್ಗದ ಮುಖ್ಯಸ್ಥರಿಗೆ ಖುದ್ದಾಗಿ ಕರೆ ಮಾಡಿ ವಿಜಯ್ ಅವರ ಯೋಗ-ಕ್ಷೇಮ ವಿಚಾರಿಸಿದ್ದಾರೆ. ಚಿಕಿತ್ಸೆ ಆಗುವ ಸಂಪೂರ್ಣ ವೆಚ್ಚವನ್ನು ತಮ್ಮ ನೇತೃತ್ವದ ಡಾ. ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ಭರಿಸುತ್ತದೆ ಎಂದು ಹೇಳಿದ್ದಾರೆ.
ಅಪಘಾತವಾಗಿದ್ದು ಹೇಗೆ?:
ಶನಿವಾರ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕಿನಲ್ಲಿ ನಟ ಹಿಂದಿರುಗುತ್ತಿದ್ದರು. ಗೆಳೆಯ ನವೀನ್ ಬೈಕ್ ಓಡಿಸುತ್ತಿದ್ದು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ನಟ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ಸಂಚಾರಿ ವಿಜಯ್ ಕೋಮಾದಲ್ಲಿದ್ದಾರೆ, ಪರಿಸ್ಥಿತಿ ಗಂಭೀರ- ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
ವಿಜಯ್ ಬಲ ತೊಡೆ ಭಾಗ ಮುರಿದಿದ್ದು, ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ತಲೆಗೆ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದರಿಂದ ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಿದೆ. ಮೆದುಳಿನ ರಕ್ತಸ್ತ್ರಾವ ತಡೆಗೆ ಸರ್ಜರಿ ನಡೆದಿತ್ತು. ಡಾ.ಅರುಣ್.ಎಲ್.ನಾಯ್ಕ್ ಟೀಂ ಸಂಚಾರಿ ವಿಜಯ್ ಗೆ ಚಿಕಿತ್ಸೆ ನಿಡಿದ್ದರು. ಆರೋಗ್ಯದ ಮಾಹಿತಿ ನೀಡಲು ಆಸ್ಪತ್ರೆ 48 ಗಂಟೆ ಸಮಯ ಕೇಳಿತ್ತು. ಅಲ್ಲದೆ ನಟನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ತಲೆಭಾಗಕ್ಕೆ ಬಲವಾದ ಪೆಟ್ಟು – ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದೇಗೆ?
ಮೂಲತಃ ರಂಗಭೂಮಿ ಕಲಾವಿದರಾಗಿರುವ ಸಂಚಾರಿ ವಿಜಯ್, ‘ನಾನು ಅವನಲ್ಲ, ಅವಳಲ್ಲ’ ಸಿನಿಮಾ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಸಿನಿಮಾ ಜೊತೆಯಲ್ಲಿ `ಉಸಿರು’ ಹೆಸರಿನ ತಂಡವನ್ನು ಕಟ್ಟಿಕೊಂಡು ಲಾಕ್‍ಡೌನ್‍ನಲ್ಲಿ ಸಂಕಷ್ಟ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದರು.