ದಾವಣಗೆರೆ: ನಮ್ಮಲ್ಲೇ ಸಂಘರ್ಷ ಒಳ್ಳೆಯದಲ್ಲ, ಒಟ್ಟಾಗಿರೋಣ ಎಂದು ಹೇಳಿದ್ದೇನೆ. ಇದೀಗ ನೋಟೀಸ್ ನೀಡುವ ಕುರಿತು ರಾಜ್ಯಾಧ್ಯಕ್ಷರು ಏನು ಶಿಫಾರಸು ಮಾಡಿದ್ದಾರೆ ಎಂಬುದು ತಿಳಿದಿಲ್ಲ ಎಂದು ಶಾಸಕ ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಮಾತನಾಡಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ನಮ್ಮ ಪಕ್ಷದ ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದವರು. ಅಧಿವೇಶನದ ಸಂದರ್ಭದಲ್ಲಿ ನನ್ನ ಜೊತೆಗೆ ಇದ್ದರು. ನಮ್ಮಲ್ಲಿ ಸಂಘರ್ಷ ಒಳ್ಳೆಯದಲ್ಲ ಎಂದು ಹೇಳಿದ್ದೇನೆ. ರಾಜ್ಯದ ಅಧ್ಯಕ್ಷರು ಏನು ಶಿಫಾರಸು ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ನೋಟಿಸ್ ನೀಡಿರುವುದು ಕೇಂದ್ರದ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.
ಯತ್ನಾಳ್ ಅವರು ನೋಟಿಸ್‍ಗೆ ಸಮರ್ಪಕರವಾಗಿ ಉತ್ತರ ಕೊಡಬೇಕು. ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು. ಈ ಬಗ್ಗೆ ರಾಜ್ಯಾಧ್ಯಕ್ಷರು, ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಯತ್ನಾಳ್ ಅವರು ಲೋಪದೋಷಗಳನ್ನು ಸರಿಪಡಿಸಿಕೊಂಡು ನಾವೆಲ್ಲರೂ ಒಟ್ಟಾಗಿ ಇರಬೇಕು ಎಂಬುದು ನಮ್ಮ ವಿನಂತಿ ಎಂದರು.
ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಸಮಾಜದವರೂ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಹಾಲುಮತ ಸಮಾಜ 2ಎ ಇಂದ ಎಸ್ಟಿಗೆ, ಪಂಚಮಸಾಲಿ ಸಮಾಜ 2ಎ ಮೀಸಲಾತಿ ದೇವಾಂಗ, ಉಪ್ಪಾರ ಸಮಾಜದವರು ಎಸ್ಟಿ ಸೇರ್ಪಡೆಗೆ ಆಗ್ರಹಿಸುತ್ತಿದ್ದಾರೆ. ಆಯಾ ಸಮಾಜದ ಶ್ರೀಗಳು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಮೀಸಲಾತಿ ಕೇಳುವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜದ ಶ್ರೀಗಳು ಸಮಾವೇಶ ಮಾಡುವರಿದ್ದಾರೆ. ಅದರ ಬಗ್ಗೆಯೂ ಸಿಎಂ ಚರ್ಚೆ ಮಾಡುತ್ತಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಸಮರ್ಥರಿದ್ದಾರೆ. ಪಕ್ಷದ ರಾಷ್ಟ್ರೀಯ ವರಿಷ್ಠರೊಂದಿಗೆ ಚರ್ಚಿಸಿ ಅದನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆ. ಈ ಬಗ್ಗೆ ಈಗಾಗಲೇ ತಜ್ಞರ ಸಮಿತಿಯನ್ನು ಸಹ ರಚಿಸಲಾಗಿದೆ. ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.