ಹಾವೇರಿ: ಸಂಕಷ್ಟದಲ್ಲಿರುವ ಮೈಲಾರದ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪನವರಿಗೆ ರಾಣೆಬೆನ್ನೂರು ತಾಲೂಕು ಸುಕ್ಷೇತ್ರ ದೇವರಗುಡ್ಡದ ಗ್ರಾಮಸ್ಥರು ಧನ ಸಹಾಯ ಮಾಡಿದ್ದಾರೆ.
ಶ್ರೀಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸಂತೋಷ ಭಟ್ ನೇತೃತ್ವದಲ್ಲಿ ಗ್ರಾಮದ ಮುಖ್ಯಸ್ಥರು ಭೇಟಿ ನೀಡಿ, ನೊಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ ದೇವರಗುಡ್ಡ ಗ್ರಾಮದ ವತಿಯಿಂದ 50 ಸಾವಿರ ರೂ. ಧನ ಸಹಾಯ ನೀಡುವ ಮೂಲಕ ಧನ್ಯತೆ ಮೆರೆದರು. ಶ್ರೀಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಮಾತನಾಡಿ, ಅತ್ಯಂತ ಶಿಸ್ತು ಹಾಗೂ ನಿಷ್ಠೆಯಿಂದ ಸ್ಪಷ್ಟವಾಗಿ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ ನುಡಿಯುವ ಮೂಲಕ ಮಾಲತೇಶ್ ಗೊರವಯ್ಯನವರು ನಾಡಿನ ಸಿರಿ, ಸಂಪತ್ತು ಸಂಮೃದ್ಧಿಗೆ ಕಾರಣಿಭೂತರಾಗಿದ್ದಾರೆ ಎಂದರು.
ಕಳೆದ 9 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಬಹಳ ದು:ಖದ ವಿಚಾರ. ಇಂತಹ ಸಮಯದಲ್ಲಿ ಅವರ ಸಂಕಷ್ಟಕ್ಕೆ ಸ್ಪಂದಿಸಿ ನಮ್ಮ ದೇವರಗುಡ್ಡ ಗ್ರಾಮದ ವತಿಯಿಂದ 50 ಸಾವಿರ ಸಹಾಯ ಧನವನ್ನು ನೀಡುತ್ತಿದ್ದೇವೆ. ಅವರು ಬೇಗನೆ ಗುಣಮುಖರಾಗಿ ಮತ್ತೆ ಕಾರ್ಯಪ್ರವೃತ್ತರಾಗಲಿ ಎಂದು ಆ ಭಗವಂತ ಮೈಲಾರಲಿಂಗೇಶ್ವರ ಹಾಗೂ ಮಾಲತೇಶನಲ್ಲಿ ಬೇಡಿಕೊಳ್ಳುವೆ. ಕೂಡಲೇ ಸರ್ಕಾರ ಹಾಗೂ ಕ್ಷೇತ್ರದ ಶಾಸಕರು ಮತ್ತು ಸಂಸದರು ಇವರಿಗೆ ಗೃಹ ನಿರ್ಮಾಣ ಮಾಡಿಕೊಡುವ ಮೂಲಕ ಧನ್ಯತೆ ಮೆರೆಯಬೇಕಾಗಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದೇವರಗುಡ್ಡ ಗ್ರಾಮದ ಮುಖಂಡರಾದ ಮಲ್ಲಯ್ಯ ಒಡೆಯರ್, ಹನುಮಂತಪ್ಪ ನಾಯರ್, ಡಿಳ್ಳೆಪ್ಪ ಐಗೂಳ, ರುದ್ರಪ್ಪ ಜಜ್ಜೂರಿ, ಪಕ್ಕೀರಪ್ಪ ಐಗೂಳ, ನಿಂಗಪ್ಪ ದ್ಯಾಮಣ್ಣನವರ, ದೇವಪ್ಪ ವಾಸರದ, ಚಿಕ್ಕಪ್ಪ ಬಡಿಗೇರ ಹಾಗೂ ನಿಂಗಪ್ಪ ಹುಲ್ಲಾಳ ಹಾಜರಿದ್ದರು.