ಧಾರವಾಡ: ಕ್ಯಾನ್ಸರ್‍ನಿಂದ ಬಳಲುತ್ತಿರುವ ಶ್ವಾನದ ಹೊಟ್ಟೆಯಿಂದ 10 ಕ್ಯಾನ್ಸರ್ ಗಡ್ಡೆಗಳನ್ನು ವೈದ್ಯರು ತೆಗೆದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾ ವಿಭಾಗದ ವೈದ್ಯ ಡಾ. ಅನಿಲಕುಮಾರ ಪಾಟೀಲ ಮತ್ತು ತಂಡ, ಕ್ಯಾನ್ಸರ್‍ನಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ವಿಶೇಷ ಚಿಕಿತ್ಸೆ ಮಾಡಿ, ಅದರ ಹೊಟ್ಟೆ ಒಳಗಿದ್ದ ಹತ್ತು ಕ್ಯಾನ್ಸರ್ ಗಡ್ಡೆಗಳನ್ನು ಹೊರತೆಗೆದಿದ್ದಾರೆ.
ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಲ್ಯಾಬ್ರಡಾರ್ ನಾಯಿಯೇ ಈ ವಿಶೇಷ ಚಿಕಿತ್ಸೆಗೆ ಒಳಗಾಗಿತ್ತು. ಈ ನಾಯಿ ಅಬ್ಡೋಮಿನಲ್ ಟ್ಯೂಮರ್ ಎಂಬ ಕ್ಯಾನ್ಸರ್ ಗಡ್ಡೆ ಕಾಯಿಲೆಗೆ ತುತ್ತಾಗಿತ್ತು. ಇದೇ ನಾಯಿಗೆ ಒಂದೂವರೆ ವರ್ಷ ಇದ್ದಾಗಲೂ ಸಹ ಶಸ್ತ್ರ ಚಿಕಿತ್ಸೆಯನ್ನು ಈ ಹಿಂದೆ ಮಾಡಲಾಗಿತ್ತು.
ಕಳೆದ ಹತ್ತು ದಿನಗಳಿಂದ ನಾಯಿ ಸರಿಯಾಗಿ ಆಹಾರ ಸೇವಿಸದೇ ಒದ್ದಾಡುತಿತ್ತು. ಏನೇ ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಯಿಯನ್ನು ಡಾ. ಅನಿಲಕುಮಾರ ಬಳಿ ನಾಯಿ ಮಾಲೀಕರು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸೋನೋಗ್ರಾಫಿ ಮಾಡಿ ನೋಡಿದಾಗ ಹೊಟ್ಟೆಯೊಳಗೆ ಗಂಟುಗಳಿರುವುದು ಪತ್ತೆಯಾಗಿದ್ದವು. ಈ ಹಿನ್ನೆಲೆ ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಅನೀಲ ಕುಮಾರ್ ಪಾಟೀಲ ನೇತೃತ್ವದ ತಂಡ, ನಾಯಿಯ ಹೊಟ್ಟೆಯಿಂದ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾಗಿದೆ.