ಕೊಲಂಬೋ: ಶ್ರೀಲಂಕಾದ ಸ್ಟಾರ್ ಕ್ರಿಕೆಟರ್, ಯುವ ಬೌಲರ್ ಶೆಹನ್ ಮಧುಶಂಕಾ ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.
ಶೆಹನ್ ಮಧುಶಂಕಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶ್ವದ ಗಮನ ಸೆಳೆದಿದ್ದರು. ಆದರೆ ಹೆರಾಯಿನ್ ಡ್ರಗ್ ಹೊಂದಿದ್ದ ಆರೋಪದಡಿ ಅವರನ್ನು ಭಾನುವಾರ ಬಂಧಿಸಲಾಗಿದೆ.
ಬೌಲರ್ ಶೆಹನ್ ಮಧುಶಂಕಾ ಶ್ರೀಲಂಕಾದ ಟೌನ್ ಪನ್ನಾಲದಲ್ಲಿ ಮೇ 24ರಂದು ಇಬ್ಬರು ಪರಿಚಿತರ ಜೊತೆಗೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಸುಮಾರು 2.5 ಗ್ರಾಂ ತೂಕದ ಹೆರಾಯಿನ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆ ಶ್ರೀಲಂಕಾ ದೇಶದಾದ್ಯಂತ ಭಾನುವಾರ ಕರ್ಫ್ಯೂ ಜಾರಿಯಲ್ಲಿತ್ತು. ಈ ವೇಳೆ ಶೆಹನ್ ಮಧುಶಂಕಾ ಮತ್ತು ಸಹಚರರು ವಾಹನದಲ್ಲಿ ಹೋಗುತ್ತಿದ್ದಾಗ ಪೊಲೀಸರು ತಡೆದು ವಿಚಾರಿಸಿದ್ದರು. ಕಾರಿನಲ್ಲಿ ಹೆರಾಯಿನ್ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪರಿಶೀಲನೆ ನಡೆಸಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮಧುಶಂಕಾ ಅವರನ್ನು 2 ವಾರಗಳ ಕಸ್ಟಡಿಗೆ ಒಪ್ಪಿಸಿದೆ.