ಬೆಂಗಳೂರು: ಡೇಟಿಂಗ್ ಆಪ್, ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಮದುವೆ ಆಗೋದಾಗಿ ನಂಬಿಸಿ ಯುವತಿಯರಿಗೆ ವಂಚಿಸುತ್ತಿದ್ದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಹಾಸ್ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ಈತ ಉತ್ತರಹಳ್ಳಿಯ ನಿವಾಸಿಯಾಗಿದ್ದು, ಇದೀಗ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಹರಿಪ್ರಸಾದ್ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತು ಡೇಟಿಂಗ್ ಆಪ್ ಮೂಲಕ ಶ್ರೀಮಂತ ಹುಡುಗಿಯರನ್ನ ಟಾರ್ಗೆಟ್ ಮಾಡುತ್ತಿದ್ದನು. ನಂತರ ತಾನೂ ವಿದೇಶದಲ್ಲಿ ಬಿಸಿನೆಸ್ ಮಾಡುತ್ತಿರೋದಾಗಿ ಯುವತಿಯರಿಗೆ ನಂಬಿಸುತ್ತಿದ್ದನು. ಅದರಂತೆ ಐಷಾರಾಮಿ ಕಾರು, ಹೋಟೆಲಿನಲ್ಲಿ ವಾಸ ಮಾಡುತ್ತಿರುವಂತೆ ಅವರಿಗೆ ಫೋಟೋ ಕಳುಹಿಸುತ್ತಿದ್ದನು. ನಂತರ ಯುವತಿಯರನ್ನು ಪ್ರೀತಿಸುವ ನಾಟಕವಾಡುತ್ತಿದ್ದನು.
ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದನು. ಇದೇ ರೀತಿ ಅನೇಕ ಯುವತಿಯರಿಗೆ ನಂಬಿಸಿ ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದನು. ಇತ್ತೀಚೆಗೆ ಯುವತಿಯೊಬ್ಬಳಿಂದ ಕಾರು ಖರೀದಿ ಮಾಡುವುದಾಗಿ ಹೇಳಿ 12 ಲಕ್ಷ ಹಣ ಪಡೆದು ವಂಚನೆ ಮಾಡಿದ್ದನು. ಈ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಬೊಮ್ಮನಹಳ್ಳಿ ಪೊಲೀಸರು ಆರೋಪಿ ಸುಹಾಸ್ ಹರಿಪ್ರಸಾದ್‍ನನ್ನು ಬಂಧಿಸಿದ್ದಾರೆ.