ಶ್ರವಣಬೆಳಗೊಳದಲ್ಲಿ ಮತ್ತೊಂದು ಶಿಲಾಶಾಸನ ಪತ್ತೆ

Public TV
1 Min Read
hsn shravanagola

ಹಾಸನ: ಇಡೀ ರಾಜ್ಯದಲ್ಲಿ ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಶಿಲಾ ಶಾಸನಗಳು ದೊರೆತಿರುವ ಶ್ರವಣಬೆಳಗೊಳದಲ್ಲಿ ಮತ್ತೊಂದು ಅಪ್ರಕಟಿತ ಶಿಲಾ ಶಾಸನ ಪತ್ತೆಯಾಗಿದೆ. ಸಂಶೋಧನೆಯಿಂದ ಶಾಸನದಲ್ಲಿರುವ ನಿಖರ ಮಾಹಿತಿ ತಿಳಿಯಬೇಕಿದೆ.

ವಿಂಧ್ಯಗಿರಿ ಬೆಟ್ಟದ ಹಿಂಭಾಗದ ಸುಮಾರು 300 ಮೀಟರ್ ಅಂತರದಲ್ಲಿರುವ ಕಬ್ಬಾಳು ಸರ್ವೆ ನಂಬರ್ ವ್ಯಾಪ್ತಿಯ ನಾಗಯ್ಯನಕೊಪ್ಪಲು ಗ್ರಾಮದ ಸುಕುಮಾರ್ ಅವರ ಜಮೀನಿನಲ್ಲಿ ಪೂರ್ವಾಭಿಮುಖವಾಗಿರುವ ಬಂಡೆಕಲ್ಲಿನ ಮೇಲೆ ಕೆತ್ತಿರುವ ಸುಮಾರು 7 ಸಾಲುಗಳ ಹಳೆಗನ್ನಡ ಲಿಪಿಯಲ್ಲಿರುವ ಶಿಲಾಲೇಖ ಕುತೂಹಲ ಮೂಡಿಸಿದೆ.

Shravanabelagola

ಈ ಕುರಿತು ಶ್ರವಣಬೆಳಗೊಳದ ಎಸ್.ಎನ್.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಶಿಲಾಶಾಸನಗಳ ಸಂಶೋಧಕ ಡಾ.ಎಸ್.ದಿನೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಇದು ‘ಎಪಿಗ್ರಾಫಿಯ ಕರ್ನಾಟಿಕ’ ಸಂಪುಟದಲ್ಲಿ ಈವರೆಗೆ ಪ್ರಕಟವಾಗದ ಶಾಸನವಾಗಿದ್ದು, ಲಿಪಿಯ ಆಧಾರದ ಮೇಲೆ ಸುಮಾರು 10 ರಿಂದ 11 ನೇ ಶತಮಾನದಲ್ಲಿ ರಚಿಸಿರುವ ದತ್ತಿ ಶಾಸನ ಎಂದು ಅಂದಾಜಿಸಬಹುದು. ಇದೊಂದು ಮಹತ್ವದ ಶಾಸನವಾಗಿದ್ದು, ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಸಂಬಂಧಪಟ್ಟ ಉಪಕರಣಗಳಿಂದ ಶಾಸನದ ಅಚ್ಚನ್ನು ತೆಗೆದು ಪ್ರಕಟ ಮಾಡಿದ ನಂತರವಷ್ಟೇ ಈ ಶಾಸನದ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಎಂದು ಹೇಳಿದರು.

ಶ್ರವಣಬೆಳಗೊಳ ಶಾಸನಗಳ ನೆಲೆಬೀಡಾಗಿದ್ದು, ಇಲ್ಲಿನ ಚಂದ್ರಗಿರಿ ಚಿಕ್ಕಬೆಟ್ಟದಲ್ಲಿ 271, ವಿಂಧ್ಯಗಿರಿ ದೊಡ್ಡಬೆಟ್ಟದಲ್ಲಿ 172, ಶ್ರವಣಬೆಳಗೊಳ ಪಟ್ಟಣ ವ್ಯಾಪ್ತಿಯಲ್ಲಿ 80 ಹಾಗೂ ಅಕ್ಕ-ಪಕ್ಕದ ಗ್ರಾಮಗಳಲ್ಲಿ 50 ಶಾಸನಗಳು ಸೇರಿ ಒಟ್ಟು 573 ಶಿಲಾ ಶಾಸನಗಳು ದೊರಕಿದ್ದು, ಪ್ರತ್ಯೇಕ ಸಂಪುಟವನ್ನೇ ಒಳಗೊಂಡು ಪ್ರಕಟಗೊಂಡಿದೆ. ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶಿಲಾ ಶಾಸನಗಳು, ತಾಳೆಗರಿ ಶಾಸನಗಳು ಹಾಗೂ ಇನ್ನಿತರ ಪುರಾತನ ಕುರುಹುಗಳನ್ನು ಸಂರಕ್ಷಿಸುವ ಕೈಂಕರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

masthakabhisheka 4

ಈ ಭಾಗದಲ್ಲಿ ಇನ್ನೂ ಹಲವಾರು ಶಿಲಾ ಶಾಸನಗಳು ದೊರಕುವ ಸಾಧ್ಯತೆಯಿದ್ದು, ಎಷ್ಟೋ ಶಾಸನಗಳು ತೆರೆಮರೆಯಲ್ಲಿವೆ. ಪುರಾತತ್ವ ಇಲಾಖೆ ತಂಡಗಳನ್ನು ರಚಿಸಿ ಮಣ್ಣಿನಲ್ಲೋ, ಪೊದೆಗಳಲ್ಲೋ ಹುದುಗಿರುವ ಬೆಳಕಿಗೆ ಬಾರದಿರುವ ಶಿಲಾಲೇಖಗಳನ್ನು ಹುಡುಕಿ ಸಂರಕ್ಷಣೆ ಮಾಡಿ, ಅದರಲ್ಲಿರುವ ಮೌಲಿಕ ವಿಷಯಗಳನ್ನು ಹೊರಜಗತ್ತಿಗೆ ತಿಳಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *