ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ – ಮೆಚ್ಚುಗೆಗೆ ಪಾತ್ರವಾದ ಸ್ಟಾರ್‌ ಸ್ಫೋರ್ಟ್ಸ್‌

Public TV
2 Min Read
Nicholas Pooran main 2

ಶಾರ್ಜಾ: ಭಾನುವಾರ ಪಂಜಾಬ್‌ ಆಟಗಾರ ನಿಕೋಲಸ್‌ ಪೂರನ್‌ ಅವರು ಬೌಂಡರಿ ಗೆರೆ ಬಳಿ ಹಾರಿ ಫೀಲ್ಡಿಂಗ್‌ ಮಾಡಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿ ಸ್ಟಾರ್‌ ಸ್ಫೋರ್ಟ್ಸ್‌ ಕನ್ನಡ ವಾಹಿನಿ ಮಾಡಿದ ಟ್ವೀಟ್‌ ಕರ್ನಾಟಕದ ಜನತೆಗೆ ಭಾರೀ ಇಷ್ಟವಾಗಿದೆ.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪೂರನ್‌ ಅವರ ಫೀಲ್ಡಿಂಗ್‌ ಮಾಡುತ್ತಿರುವ ಫೋಟೋವನ್ನು ಹಾಕಿ ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್‌ ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಅನ್ನು ರೀ ಟ್ವೀಟ್‌ ಮಾಡಿದ ಸ್ಟಾರ್‌ ವಾಹಿನಿ , ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ (ಶೇ ಎಂಥ ಫೀಲ್ಡಿಂಗ್‌ ಮಾರಾಯರೇ) ಎಂದು ಬರೆದು ಟ್ವೀಟ್‌ ಮಾಡಿತ್ತು.

Nicholas Pooran main

ಈ ಟ್ವೀಟ್‌ ಅನ್ನು 3 ಸಾವಿರಕ್ಕೂ ಹೆಚ್ಚು ಜನ ಲೈಕ್‌ ಮಾಡಿ, 300ಕ್ಕೂ ಹೆಚ್ಚು ಜನ ರೀ ಟ್ವೀಟ್‌ ಮಾಡಿದ್ದಾರೆ. ಹರೀಶ್‌ ಗೌಡ ಎಂಬವರು ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ, ಶೇ.. ಎಂಚಿನ ಮ್ಯಾಚ್ ಮಾರ್ರೆ, ಶೇ.. ಎಂಚಿನ ಬ್ಯಾಟಿಂಗ್ ಮಾರ್ರೆ, ಶೇ.. ಎಂಚಿನ ಟ್ರಾನ್ಸಲೇಷನ್ ಮಾರ್ರೆ ಎಂದು ಕಮೆಂಟ್‌ ಮಾಡಿದ್ದಾರೆ.

ಅನಿಲ್‌ ಕುಮಾರ್‌ ಎಂಬವರು ಹೀಗೆಯೇ ಕನ್ನಡ, ತುಳು, ಕೊಡವ ಹಾಗೂ ನಾಡಿನ ಎಲ್ಲ ನುಡಿ ಬಳಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಸತ್ಯ ಎಂಪಿ ಎಂಬವರು ಬಾರಿ ಪೊರ್ಲುದ ಗೊಬ್ಬು ಎಂದು ಕಮೆಂಟ್‌ ಮಾಡಿದ್ದಾರೆ.

ಎಂ ಅಶ್ವಿನ್‌ ಎಸೆದ 8ನೇ ಓವರಿನ 4ನೇ ಎಸೆತವನ್ನು ಸಂಜು ಸ್ಯಾಮ್ಸನ್‌ ಸಿಕ್ಸರ್‌ಗೆ ಅಟ್ಟಲು ಬಲವಾಗಿ ಎಡಗಡೆಗೆ ಬೀಸಿದ್ದರು. ಈ ವೇಳೆ ಬೌಂಡರಿ ಲೈನ್‌ ಬಳಿ ಇದ್ದ ವಿಂಡೀಸ್‌ ಆಟಗಾರ ಪೂರನ್‌ ಗಾಳಿಯಲ್ಲಿ ಹಾರಿ ಬಾಲನ್ನು ತಡೆದು ಕ್ಷಣ ಮಾತ್ರದಲ್ಲಿ ಹಿಂದಕ್ಕೆ ಎಸೆದಿದ್ದರು.

ಈ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಟಿವಿ ರಿಪ್ಲೇಯಲ್ಲಿ ನೋಡಿದಾಗ ಪೂರನ್‌ ಫೀಲ್ಡಿಂಗ್‌ ಯಶಸ್ವಿಯಾಗಿರುವುದು ಸೆರೆಯಾಗಿತ್ತು. ಬಾಲ್‌ ಕೈಗೆ ಸಿಕ್ಕಿದ ಕೂಡಲೇ ಅದನ್ನು ಹಿಂದಕ್ಕೆ ಹಾಕಿದ ಪ್ರಯತ್ನ ಕಂಡು ಪೂರನ್‌ ಅವರನ್ನು ಅಭಿಮಾನಿಗಳು ಸೂಪರ್‌ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

ಒಂದು ವೇಳೆ ಈ ಪ್ರಯತ್ನ ನಡೆಯದಿದ್ದರೆ ಬಾಲ್‌ ಬೌಂಡರಿ ಗೆರೆ ದಾಟುತ್ತಿತ್ತು. ಈ ಪ್ರಯತ್ನದಿಂದ ಪೂರನ್‌ 4 ರನ್‌ ಸೇವ್‌ ಮಾಡಿ 2 ರನ್‌ ಮಾತ್ರ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಪೂರನ್‌ 8 ಎಸೆತದಲ್ಲಿ 3 ಸಿಕ್ಸರ್‌ ಚಚ್ಚಿ ಔಟಾಗದೇ 25 ರನ್‌ ಹೊಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *