ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

Public TV
1 Min Read
shane warne sehwag

ನವದೆಹಲಿ: ಆಸ್ಟ್ರೇಲಿಯಾದ ಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಸ್ಪಿನ್ ಪಾಠವನ್ನು ಹೇಳಿಕೊಟ್ಟಿದ್ದಾನೆ.

ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಸ್ಪಿನ್ನರ್ ಆಡಿಸದ ವಿಚಾರವನ್ನು ಶೇನ್ ವಾನ್ ಟ್ವಿಟ್ಟರ್ ನಲ್ಲಿ ಪ್ರಸ್ತಾಪ ಮಾಡಿ ಅಸಮಾಧಾನ ಹೊರ ಹಾಕಿದ್ದರು.

“ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡ ಒಬ್ಬ ಪರಿಣತ ಸ್ಪಿನ್ನರನ್ನು ಆಡಿಸದೇ ಇರುವುದು ನಿರಾಸೆ ತಂದಿದೆ. ಈ ಪಿಚ್‍ನಲ್ಲಿ ಸ್ಪಿನ್ನರ್ ಗಳು  ದೊಡ್ಡ ತಿರುವು ಪಡೆಯಬಲ್ಲರು. ಈಗಾಗಲೇ ಪಿಚ್‍ನಲ್ಲಿ ಬೌಲರ್ ಗಳ ಪಾತ್ರ ದೊಡ್ಡದಾಗಿ ಕಾಣಿಸುತ್ತದೆ. ಒಂದು ವೇಳೆ ಈ ಪಿಚ್‍ನಲ್ಲಿ ಸ್ಪಿನ್ ಲಭ್ಯವಾದರೆ, ಭಾರತ ತಂಡ 270-300 ರನ್ ಗಳಿಸಿದರೆ ಈ ಪಂದ್ಯ ಕಿವೀಸ್ ಪಾಲಿಗೆ ಮುಗಿದಂತೆ. ಕೇವಲ ಹವಾಮಾನವಷ್ಟೇ ಪಂದ್ಯದ ದಿಕ್ಕನ್ನು ಬದಲಾಯಿಸಬಲ್ಲದು ಎಂದು ವಾರ್ನ್ ಟ್ವೀಟ್ ಮಾಡಿದ್ದರು.

newzealand scaled medium

ಈ ಟ್ವೀಟ್‍ಗೆ ಅಭಿಮಾನಿಯೊಬ್ಬ, “ಶೇನ್ ನಿಮಗೆ ನಿಜಕ್ಕೂ ಸ್ಪಿನ್ ಬೌಲಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿದೆಯೇ? ಪಿಚ್ ಒಣಗಿದರೆ ಮಾತ್ರ ಸ್ಪಿನ್ ಆಗಲು ಸಾಧ್ಯ. ಎಲ್ಲಾ ದಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಸ್ಪಿನ್ ಆಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾನೆ.

ಅಭಿಮಾನಿಯ ಟ್ವೀಟ್‍ಗೆ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿ,ಶೇನ್ ವಾರ್ನ್ ಅವರ ಕಾಲೆಳೆದಿದ್ದಾರೆ. “ಶೇನ್ ವಾರ್ನ್ ನಿಮ್ಮ ಈ ಟ್ವೀಟ್ ಅನ್ನು ಫ್ರೇಮ್ ಹಾಕಿ ಇಟ್ಟುಕೊಳ್ಳಬೇಕು ಮತ್ತು  ಸ್ಪಿನ್ ಹೇಗೆ ಆಗುತ್ತದೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿ” ಎಂದು ಹೇಳಿ ಗೂಗ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಿದರೆ, ನ್ಯೂಜಿಲೆಂಡ್ ತಂಡ ಯಾವುದೇ ಸ್ಪಿನ್ನರ್‍ಗಳನ್ನು ತೆಗೆದುಕೊಳ್ಳದೆ ಐವರು ವೇಗಿಗಳೊಂದಿಗೆ ಕಣಕ್ಕೆ ಇಳಿದಿದೆ.

Share This Article