ಕಾರವಾರ: ಮಗುವಿನ ಗಂಟಲಲ್ಲಿ ಶೇಂಗಾ ಬೀಜ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ನಡೆದಿದೆ. ಮಗು ಸಾವನ್ನಪ್ಪಿದ ತಕ್ಷಣ ದಿಕ್ಕೇ ತೋಚದ ಮಗುವಿನ ಅಜ್ಜಿ, ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ ಬದುಕಿಸಿಕೊಡುವಂತೆ ಅಂಗಲಾಚಿದ ಮನ ಕಲುಕುವ ಘಟನೆ ನಡೆದಿದೆ.
ಯಲ್ಲಾಪುರದ ರಾಮನಾಥ ಆಚಾರಿ ಅವರ ಎರಡೂವರೆ ವರ್ಷದ ಸಾತ್ವಿಕ್ ಮೃತ ಮಗುವಾಗಿದ್ದು, ಬಾಲಕ ಮನೆಯಲ್ಲಿ ಇಂದು ಸಂಜೆ ಶೇಂಗಾ ಬೀಜಗಳನ್ನು ತಿನ್ನುತ್ತಿದ್ದಾಗ ಅಚಾನಕ್ ಆಗಿ ಗಂಟಲಲ್ಲಿ ಸಿಲುಕಿಕೊಂಡಿವೆ. ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತು. ಮನೆಯವರು ತಕ್ಷಣವೇ ಹಾಗೂ ಹೀಗೂ ಪ್ರಯತ್ನ ಮಾಡಿ ಗಂಟಲಿನಿಂದ ಎರಡು ಶೇಂಗಾ ಬೀಜಗಳನ್ನು ಹೊರ ತೆಗೆದರು. ಆದರೂ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ತಕ್ಷಣ ವೈದ್ಯರು ಗಂಟಲಲ್ಲಿದ್ದ ಮತ್ತೊಂದು ಶೇಂಗಾ ಬೀಜವನ್ನು ಹೊರತೆಗೆದರು. ಆದರೆ ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಅಜ್ಜಿ ಮೊಮ್ಮಗನ ಮೃತದೇಹವನ್ನು ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತೆಗೆದುಕೊಂಡು ಹೋದರು. ಗರ್ಭಗುಡಿಯೆದುರು ಮಲಗಿಸಿದ ಅಜ್ಜಿ, ದೇವಸ್ಥಾನದ ಘಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆ ಹೋದರು. ಈ ಸನ್ನಿವೇಶಗಳನ್ನು ಅಸಹಾಯಕರಾಗಿ ನೋಡುತ್ತಿದ್ದವರೂ ಭಾವುಕರಾಗಿ ಅವರ ಕಣ್ಣುಗಳಲ್ಲಿ ಹನಿಗೂಡಿದ್ದವು. ನಂತರ ಕುಟುಂಬದವರು ಅಜ್ಜಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ಕರೆದುಕೊಂಡು ಹೋದರು.